ವರ್ಷಗಳಿಂದ ವಿಲೇವಾರಿಯಾಗದ ನೂರಾರು ಕಡತಗಳು ಪತ್ತೆ | ಅನುಮಾನಾಸ್ಪದ ದಾಖಲೆಗಳು ಜಪ್ತಿ
ಬ್ರಹ್ಮಾವರ:ಇಲ್ಲಿನ ತಹಶೀಲ್ದಾರ್ ಕಚೇರಿಯ ಅಸಮರ್ಪಕ ಕಾರ್ಯ ವೈಖರಿ ಮತ್ತು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧನಾ ವಾರೆಂಟ್‌ನೊಂದಿಗೆ ದಿಢೀರ್ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಬ್ರಹ್ಮಾವರ ತಹಶೀಲ್ದಾರ್ ಕಚೇರಿಯ ಆಡಳಿತ ಮತ್ತು ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ಈ ಸಂಬಂಧ ಸಾಕಷ್ಟು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ದಿನೇಶ ಕುಮಾರ್ ಅವರ ನೇತೃತ್ವದಲ್ಲಿ ಕಚೇರಿಯಲ್ಲಿ ಶೋಧನಾ ವಾರೇಂಟ್ ಜೊತೆ ಬಂದ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ಕೈಗೊಂಡರು. ಲೋಕಾಯುಕ್ತ ಪೊಲೀಸರು ಒಟ್ಟು ನಾಲ್ಕು ತಂಡಗಳಾಗಿ ವಿಂಗಡಣೆಯಾಗಿ, ತಾಲ್ಲೂಕು ಸೌಧದ ವಿವಿಧ ವಿಭಾಗಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಸಿದರು.
ವರ್ಷಗಳಿಂದ ಧೂಳು ಹಿಡಿಯುತ್ತಿರುವ ಕಡತಗಳು!
ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಸಾರ್ವಜನಿಕರ ಹಲವಾರು ಪ್ರಮುಖ ದಾಖಲೆಗಳು ಮತ್ತು ಕಡತಗಳು ವರ್ಷಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ನಿಯಮಬಾಹಿರವಾಗಿ ಹಲವಾರು ಕಡತಗಳನ್ನು ಆತುರಾತುರವಾಗಿ ವಿಲೇವಾರಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದಾಗ, ಕಚೇರಿಯ ಜವಾಬ್ದಾರಿಯುತ ಅಧಿಕಾರಿಗಳಿಂದ ಯಾವುದೇ ಸೂಕ್ತ ಉತ್ತರ ಸಿಗಲಿಲ್ಲ ಎನ್ನಲಾಗಿದೆ.
ಡಿಜಿಟಲೀಕರಣಕ್ಕೂ ಕನ್ನ:
ಸರ್ಕಾರವು ಸಾರ್ವಜನಿಕರ ಸೌಲಭ್ಯಕ್ಕಾಗಿ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುವುದು ಎಂದು ಹೇಳುತ್ತಿದ್ದರೂ, ಬ್ರಹ್ಮಾವರ ತಹಶೀಲ್ದಾರ್ ಕಚೇರಿಯಲ್ಲಿ ಕಡತಗಳು ಸರಿಯಾಗಿ ಆನ್‌ಲೈನ್‌ಗೆ ಅಪ್‌ಲೋಡ್ ಆಗಿಲ್ಲ. ಇತ್ತ ಆಫ್‌ಲೈನ್‌ನಲ್ಲೂ ದಾಖಲೆಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಜನರನ್ನು ಅಲೆದಾಡಿಸಲಾಗುತ್ತಿದೆ. ಕಚೇರಿ ಸಿಬ್ಬಂದಿಯ ಈ ಬೇಜವಾಬ್ದಾರಿತನ ಹಾಗೂ ಉಡಾಫೆಯ ಉತ್ತರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲೇ ಉಪ ತಹಶೀಲ್ದಾರ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಚೇರಿಯಲ್ಲಿ ಸಂಜೆ ಆರಂಭವಾದ ಲೋಕಾಯುಕ್ತರ ಈ ತಪಾಸಣಾ ಕಾರ್ಯವು ತಡರಾತ್ರಿ 11 ಗಂಟೆಯವರೆಗೂ ಮುಂದುವರಿಯುವ ಸಾಧ್ಯತೆ ಇದೆ. ವಿಲೇವಾರಿಯಾಗದ ಕಡತಗಳಿಗೆ ಸೂಕ್ತ ಕಾರಣ ನೀಡದ ಮತ್ತು ನಿಯಮಬಾಹಿರವಾಗಿ ನಡೆದಿರುವ ಅನುಮಾನಾಸ್ಪದ ದಾಖಲೆಗಳನ್ನು ಅಧಿಕಾರಿಗಳು ಮಹಜರು ಮಾಡಿ, ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ.
ಮುಂದಿನ ಕ್ರಮ:
“ವಶಪಡಿಸಿಕೊಳ್ಳಲಾದ ಸಂಶಯಾಸ್ಪದ ದಾಖಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶೀಘ್ರದಲ್ಲೇ ನೋಟಿಸ್ ನೀಡಿ ಸೂಕ್ತ ವಿವರಣೆ ಕೇಳಲಾಗುತ್ತದೆ. ನೋಟಿಸ್‌ಗೆ ಕಚೇರಿಯಿಂದ ಸರಿಯಾದ ಉತ್ತರ ಬರದೇ ಇದ್ದಲ್ಲಿ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.








