ಕೋಟ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕದ ಭಯದಲ್ಲಿ ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ಕೋಟ ಠಾಣೆ ಪೊಲೀಸರು 24 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ.
ಸಕಲೇಶಪುರದಲ್ಲಿ ಪತ್ತೆಯಾಗಿರುವ ಬಾಲಕನನ್ನು ಕೋಟ ಠಾಣೆ ಪೊಲೀಸರು ವಾಪಾಸು ಕರೆದುಕೊಂಡು ಬರುತ್ತಿದ್ದಾರೆ.
ಮೇ3ರಂದು ನೀಟ್ ಪರೀಕ್ಷೆ ಬರೆದಿರುವ ಬಾಲಕ ಅಭಿಷೇಕ್ (17) ಸೋಮವಾರ ಮಧ್ಯಾಹ್ನ 3.30ಕ್ಕೆ ತಾಯಿಗೆ ಕರೆ ಮಾಡಿ ನಾನು ಮಣಿಪಾಲಕ್ಕೆ ಹೋಗುವುದಾಗಿ ತೆರಳಿದ್ದ, ಎಷ್ಟು ಹೊತ್ತಾದರೂ ಬಾರದೆ ಇರುವುದನ್ನು ಕಂಡು ಹುಡುಕಾಟ ನಡೆಸಿದಾಗ ಪತ್ರವೊಂದು ದೊರಕಿದ್ದು ಅದರಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವ ಭೀತಿಯನ್ನು ವ್ಯಕ್ತಪಡಿಸಿ ಮನೆ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಆತಂಕಗೊಂಡ ಪೋಷಕರು ಕೋಟ ಠಾಣೆಯಲ್ಲಿ ದೂರು ನೀಡಿದ್ದರು.
ಅವನು ತೆರಳಿರುವ ಜಾಡು ಹಿಡಿದ ಪೊಲೀಸರು, ಸಕಲೇಶಪುರದಲ್ಲಿ ಪತ್ತೆ ಮಾಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ನಾಪತ್ತೆಯಾಗಿರುವ ಬಾಲಕನನ್ನು 24ಗಂಟೆಯೊಳಗೆ ಪತ್ತೆ ಹಚ್ಚಿರುವ ಕೋಟ ಠಾಣಾ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.








