ಕೋಟ: ರಸ್ತೆಗಳಿಲ್ಲದ, ವಾಹನಗಳ ಸೌಲಭ್ಯವಿಲ್ಲದ ಕಾಲದಲ್ಲಿ ಎತ್ತಿನ ಗಾಡಿಯ ಮೂಲಕ ಬದುಕು ಕಟ್ಟಿಕೊಂಡು, ಕಠಿಣ ಪರಿಶ್ರಮದಿಂದಲೇ ಯಶಸ್ಸಿನ ಶಿಖರವೇರಿದ್ದ ಕೋಟ ಗಿಳಿಯಾರಿನ ಹಿರಿಯ ವ್ಯಕ್ತಿತ್ವ, ‘ಗಾಡಿ ಕೂಸಣ್ಣ’ ಎಂದೇ ಖ್ಯಾತರಾಗಿದ್ದ ಕೂಸ ಪೂಜಾರಿ (90+) ಅವರು ವಿಧಿವಶರಾಗಿದ್ದಾರೆ.
ಬರಡು ಭೂಮಿಯಲ್ಲಿ ಬೆವರು ಸುರಿಸಿ ಹೊನ್ನು ಬೆಳೆದ ಕಾಯಕಯೋಗಿಯ ನಿರ್ಗಮನದೊಂದಿಗೆ ಗಿಳಿಯಾರು ಗ್ರಾಮದ ಶ್ರಮಜೀವಿಯೊಬ್ಬರ ಯುಗವೊಂದು ಅಂತ್ಯವಾದಂತಾಗಿದೆ.
ಎತ್ತಿನ ಗಾಡಿಯಿಂದ ಜೆಸಿಬಿ ಸಾಮ್ರಾಜ್ಯದವರೆಗೆ..
ಕೂಸ ಪೂಜಾರಿಯವರ ಬದುಕು ಇಂದಿನ ಪೀಳಿಗೆಗೆ ಒಂದು ದೊಡ್ಡ ಪಾಠ. ಎತ್ತಿನ ಗಾಡಿ ಓಡಿಸುತ್ತಾ, ಹಗಲಿಡೀ ಸರಕು ಸಾಗಾಟ ಮಾಡಿ, ರಾತ್ರಿಯಿಡೀ ಗದ್ದೆಯಲ್ಲಿ ದುಡಿಯುತ್ತಿದ್ದ ಅವರು ‘ಶ್ರಮವೇ ದೇವರು’ ಎಂದು ನಂಬಿದವರು. ಹುಲ್ಲಿನ ಮನೆಯಿಂದ ಬದುಕನ್ನು ಆರಂಭಿಸಿದ ಇವರು, ತಮ್ಮ ಪರಿಶ್ರಮದ ಮೂಲಕವೇ ಸ್ವಂತ ಮನೆ ನಿರ್ಮಿಸಿಕೊಂಡರು.
ಕಾಲ ಬದಲಾದಂತೆ ಮಗ ಭೋಜ ಪೂಜಾರಿ ಅವರೊಂದಿಗೆ ಸೇರಿ ಸಾರಿಗೆ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದರು. ಇಂದು ಗಿರಿಜಾ ರೋಡ್ ಲೈನ್ಸ್ ಮೂಲಕ ಹತ್ತಾರು ವಾಹನಗಳು, ಜೆಸಿಬಿ, ಹಿಟಾಚಿಗಳ ಒಡೆಯರಾಗಿ ಬೆಳೆದಿರುವ ಈ ಕುಟುಂಬದ ಯಶಸ್ಸಿನ ಹಿಂದೆ ಕೂಸಣ್ಣನವರ ಅಡಿಪಾಯವಿದೆ.
ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಅಮರವಾದ ಶ್ರಮ
ಕೂಸ ಪೂಜಾರಿಯವರ ಶ್ರಮ ಸಂಸ್ಕೃತಿಯನ್ನು ಗುರುತಿಸಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಇವರ ಗೌರವಾರ್ಥವಾಗಿ ಎತ್ತಿನ ಗಾಡಿಯೊಂದಿಗೆ ಇರುವ ಪ್ರತಿಕೃತಿಯನ್ನು (Statue) ಸ್ಥಾಪಿಸಲಾಗಿದೆ. ಇದು ಕೇವಲ ಒಂದು ಪ್ರತಿಮೆಯಲ್ಲ, ಕರಾವಳಿಯ ಶ್ರಮಜೀವಿ ಸಂಸ್ಕೃತಿಗೆ ಸಂದ ಗೌರವವಾಗಿದೆ. ನಾಲ್ಕು ವರ್ಷಗಳ ಹಿಂದೆ ಜನಸೇವಾ ಟ್ರಸ್ಟ್ ಕೂಡ ಇವರ ಸಾಧನೆಯನ್ನು ಗುರುತಿಸಿ ವಿಶೇಷವಾಗಿ ಗೌರವಿಸಿತ್ತು.
ಸರಳತೆ ಮತ್ತು ವಿನಯದ ಸಾಕಾರಮೂರ್ತಿ
ಎಷ್ಟೇ ಆಸ್ತಿ-ಅಂತಸ್ತು ಬಂದರೂ ಕೂಸಣ್ಣನವರು ತಮ್ಮ ಸರಳತೆಯನ್ನು ಬಿಟ್ಟವರಲ್ಲ. ಇತ್ತೀಚಿನ ವರ್ಷಗಳವರೆಗೂ ತಮ್ಮ ಕಂಬಳದ ಕೋಣಗಳನ್ನು ಖುದ್ದು ತಾವೇ ಮೇಯಿಸಲು ಬಯಲಿಗೆ ಕರೆದೊಯ್ಯುತ್ತಿದ್ದರು. ಅವರ ಮುಗ್ದ ನಗೆ ಮತ್ತು ‘ಬನಿ ಕೂಕಣಿ’ ಎಂಬ ಆತ್ಮೀಯ ಮಾತುಗಳು ಇಡೀ ಗಿಳಿಯಾರು ಗ್ರಾಮಕ್ಕೆ ಚಿರಪರಿಚಿತ.
ಮೃತರ ಮಕ್ಕಳು ಪ್ರಖ್ಯಾತ ಉದ್ಯಮಿ ಭೋಜ ಪೂಜಾರಿ ಹಾಗೂ ಸಂತೋಷ್ ಪೂಜಾರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕೂಸಣ್ಣನವರ ಅಗಲಿಕೆಗೆ ಕೋಟ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.









