ಕುಂದಾಪುರ: ವಿಶ್ವ ಮೂತ್ರಪಿಂಡ ದಿನವನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಅಲ್ಲೈಡ್ ಹೆಲ್ತ್ ವಿಭಾಗದ ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವು ದೀಪ ಬೆಳಗುವ ಮೂಲಕ ಅಧಿಕೃತವಾಗಿ ಪ್ರಾರಂಭವಾಯಿತು. ನರ್ಸಿಂಗ್ ಸೂಪರಿಂಟೆಂಡೆಂಟ್ ಐಡಾ ಅಲ್ಮೇಡಾ, ಕ್ವಾಲಿಟಿ ಮುಖ್ಯಸ್ಥ ಶ್ರೀ ಪ್ರದೀಪ್ ಕುಮಾರ್, ಉಪನ್ಯಾಸಕಿ ಶ್ರೀಮತಿ ಅಂಜಲಿ ಮತ್ತು ಕುಮಾರಿ ರಕ್ಷಿತಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ: ಜನರ ಬಗ್ಗೆ ಕಾಳಜಿ ವಹಿಸುವುದು, ಗ್ರಹವನ್ನು ರಕ್ಷಿಸುವುದು” ಎಂಬ ವಿಷಯದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂತ್ರಪಿಂಡದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಮೂತ್ರಪಿಂಡದ ಆರೈಕೆ, ತಡೆಗಟ್ಟುವ ಕ್ರಮಗಳ ಮಹತ್ವವನ್ನು ಎತ್ತಿ ತೋರಿಸುವ ಸಲುವಾಗಿ ಕಿರು ನಾಟಕ ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮಗಳು ಪ್ರಶಂಸನೀಯವಾಗಿ ನಡೆಯವು.
ಕಾರ್ಯಕ್ರಮವನ್ನು ೨ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ಯಶಸ್ವಿಯಾಗಿ ನಡೆಸಿಕೊಟ್ಟರು. ಕುಮಾರಿ ರಕ್ಷಿತಾ ಹಾಗೂ ಕುಮಾರಿ ನಿಕಿತಾ ಕಾರ್ಯಕ್ರಮವನ್ನು ಸರಳ ಹಾಗೂ ಸೊಗಸಾಗಿ ನಿರ್ವಹಿಸಿದರು. ಭಾಗವಹಿಸಿದ್ದವರು ಕಾರ್ಯಕ್ರಮದ ಮೂಲಕ ಮೂತ್ರಪಿಂಡದ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮವು ಶ್ರೀ ಚಿರಂಜೀವಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.










