ಬಾರ್ಕೂರು: ಇಂದಿನ ಯುವ ಜನಾಂಗ ಡ್ರಗ್ಸ್ ಮತ್ತು ಬೆಟ್ಟಿಂಗ್ನಿಂದ ಹಾದಿ ತಪ್ಪುತ್ತಿದೆ. ಎಳವೆಯಲ್ಲೇ ಈ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲಿ ಮುಂದೆ ತಪ್ಪು ಹೆಜ್ಜೆ ಇಡುವುದರಿಂದ ಪಾರಾಗಬಹುದು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಬಾರ್ಕೂರಿನ ನೇಶನಲ್ ಸುಜ್ಞಾನ್ ಪಿಯು ಕಾಲೇಜಿನಲ್ಲಿ ಭಾನುವಾರ ನಡೆದ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಉದ್ಘಾಟಿಸಿ ಮಾತನಾಡಿ, ಸುಜ್ಞಾನ್ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಈ ವಿದ್ಯಾರ್ಥಿವೇತನ ಯೋಜನೆ ಹಾಕಿಕೊಂಡಿದೆ, ಒಂದು ಸಂಸ್ಥೆಯನ್ನು ನಡೆಸುವ ಸಂದರ್ಭ ಎಷ್ಟೊಂದು ಆರ್ಥಿಕ ಹೊರೆ ಇರುತ್ತದೆ. ಆ ಆರ್ಥಿಕ ಹೊರೆಯ ನಡುವೆಯೂ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಹೆಗ್ಡೆ, ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ, ದುಶ್ಚಟಗಳಿಂದ ದೂರ ಇರಿ. ನಿಮ್ಮ ತಂದೆ ತಾಯಿ ನಿಮ್ಮ ಕ್ಷೇಮದ ನಿರೀಕ್ಷೆಯಲ್ಲಿರುತ್ತಾರೆ ಎಂದರು.
ಈ ಸಂದರ್ಭ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಹಿಂದೆ ಶಾಲೆಯನ್ನು ಮಕ್ಕಳು ಹುಡುಕಿಕೊಂಡು ಹೋಗುತ್ತಿತ್ತು. ಆದರೆ ಇಂದು ಶಾಲೆಯೇ ಮಕ್ಕಳನ್ನು ಹುಡುಕಿಕೊಂಡು ಹೋಗುತ್ತಿದೆ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಪೋಷಕರು ತಮ್ಮ ಪಾಲಿಗೆ ಬಂದ ಜಾಗವನ್ನು ಮಾರಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪೋಷಕರ ಈ ತ್ಯಾಗವನ್ನು ಗುರುತಿಸಬೇಕು. ಚಟಗಳಿಗೆ ದಾಸರಾಗದೇ ತಮ್ಮ ಭವಿಷ್ಯದ ಕಡೆ ಗಮನಕೊಡಿ ಎಂದು ಮಕ್ಕಳಿಗೆ ಬುದ್ಧಿವಾದ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಾರ್ಕೂರು ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ. ಶಾಂತಾರಾಮ್ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಲ್ ನಾಯಕ್, ಶೇಡಿಕೊಡ್ಲು ವಿಠಲ್ ಶೆಟ್ಟಿ, ರಾಜಗೋಪಾಲ್ ನಂಬಿಯಾರ್, ಕೃಷ್ಣ ಹೆಬ್ಬಾರ್, ಬ್ರಹ್ಮಾವರ ಠಾಣಾಧಿಕಾರಿ ಅಶೋಕ ಕುಮಾರ್, ಸುಜ್ಞಾನ್ ಎಜ್ಯಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು
ಸುಜ್ಞಾನ್ ಪಿಯು ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ವಿನಯ್ ಕಾರ್ಯಕ್ರಮ ನಿರೂಪಿಸಿದರು, ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿ ವಂದಿಸಿದರು.








