ಪ್ರಶ್ನೆಗಳನ್ನೇ ನುಂಗಿದ ‘ವಾಟರ್‌ ಮಾರ್ಕ್‌’: ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳ ಪರದಾಟ

March 29, 2026 8:46 AM

ಬ್ರಹ್ಮಾವರ: ರಾಜ್ಯಾದ್ಯಂತ ಮಾರ್ಚ್ 18ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಂಡಿವೆಯಾದರೂ, ಶಿಕ್ಷಣ ಇಲಾಖೆಯ ಒಂದು ‘ಅತಿ ಜಾಣ್ಮೆಯ’ ಕ್ರಮ ಈಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗುವ ಭೀತಿ ಎದುರಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಇಲಾಖೆ ಬಳಸುತ್ತಿರುವ ದಪ್ಪನೆಯ ‘ವಾಟರ್‌ ಮಾರ್ಕ್‌’ ಪ್ರಶ್ನೆಗಳನ್ನೇ ಮರೆಮಾಚುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಕಣ್ಣೀರು ಹಾಕುವಂತಾಗಿದೆ.
ಗಣಿತ ಪರೀಕ್ಷೆಯಲ್ಲಿ ಅಕ್ಷರಶಃ ಪರದಾಟ
ಶನಿವಾರ ನಡೆದ ಗಣಿತ ಪರೀಕ್ಷೆಯ ಸಂದರ್ಭದಲ್ಲಿ ಈ ಸಮಸ್ಯೆ ಗಂಭೀರತೆ ಗೊತ್ತಾಗಿದೆ. ಗಣಿತ ವಿಷಯದಲ್ಲಿ ಪ್ರತಿಯೊಂದು ಸಂಖ್ಯೆ ಮತ್ತು ಚಿಹ್ನೆಗಳು ಅತ್ಯಂತ ನಿರ್ಣಾಯಕ. ಆದರೆ, ಪ್ರಶ್ನೆ ಪತ್ರಿಕೆಯ ಉದ್ದಕ್ಕೂ ಹಾಕಲಾಗಿರುವ ವಿಶಿಷ್ಟ ಕೋಡ್ ಮಾದರಿಯ ವಾಟರ್‌ ಮಾರ್ಕ್ ಎಷ್ಟು ದಪ್ಪವಾಗಿದೆ ಎಂದರೆ, ಅದರ ಅಡಿಯಲ್ಲಿರುವ ಅಂಕಿಗಳು ಯಾವುವು ಎಂಬುದು ಗುರುತಿಸುವುದೇ ಕಷ್ಟ
ಒಂದು ಸಣ್ಣ ಸಂಖ್ಯೆ ತಪ್ಪಾಗಿ ಕಂಡರೂ ಇಡೀ ಲೆಕ್ಕವೇ ತಪ್ಪಾಗುತ್ತದೆ. ವಾಟರ್‌ ಮಾರ್ಕ್‌ ಅಕ್ಷರಗಳ ಮೇಲೆ ಕೂತಿರುವುದರಿಂದ ಪ್ರಶ್ನೆಯನ್ನು ಓದಿಕೊಳ್ಳುವುದೇ ದೊಡ್ಡ ಸವಾಲಾಗಿದೆ.


ಸೋರಿಕೆ ತಡೆಗಟ್ಟುವ ಉದ್ದೇಶ, ಆದರೆ ಅನುಷ್ಠಾನದಲ್ಲಿ ಎಡವಟ್ಟು
ಪ್ರಶ್ನೆ ಪತ್ರಿಕೆಗಳ ನಕಲು ಮಾಡುವುದನ್ನು ಅಥವಾ ಮೊಬೈಲ್ ಮೂಲಕ ಫೋಟೋ ತೆಗೆದು ಹರಿಬಿಡುವುದನ್ನು ಪತ್ತೆ ಹಚ್ಚಲು ಎಸ್‌ಎಸ್‌ಎಲ್‌ಸಿ ಬೋರ್ಡ್ ಈ ಬಾರಿ ಪ್ರತಿಯೊಂದು ಪತ್ರಿಕೆಗೆ ಪ್ರತ್ಯೇಕ ಕೋಡ್ ಇರುವ ವಾಟರ್‌ ಮಾರ್ಕ್ ಅಳವಡಿಸಿದೆ. ಆದರೆ ಅನುಷ್ಠಾನದಲ್ಲಿ ಆದ ಎಡವಟ್ಟು ಸಮಸ್ಯೆಯನ್ನು ಗಂಭೀರಗೊಳಿಸಿದೆ.
ಶಿಕ್ಷಕರು ಮತ್ತು ಪೋಷಕರ ಆಕ್ರೋಶ
ಕಳೆದ ವರ್ಷವೂ ಇಂತಹದ್ದೇ ದೂರುಗಳು ಕೇಳಿಬಂದಿದ್ದವು. ಆದರೆ ಈ ಬಾರಿ ಇಲಾಖೆ ಅದನ್ನು ಸರಿಪಡಿಸುವ ಬದಲು ಇನ್ನಷ್ಟು ದಪ್ಪ ಅಕ್ಷರಗಳಲ್ಲಿ ವಾಟರ್‌ ಮಾರ್ಕ್ ಮುದ್ರಿಸಿದೆ ಎಂದು ಶಿಕ್ಷಕರು ದೂರಿದ್ದಾರೆ.
ವಾಟರ್‌ ಮಾರ್ಕ್ ಎನ್ನುವುದು 50% ಕ್ಕಿಂತಲೂ ಕಡಿಮೆ ಗಾಢತೆಯಲ್ಲಿ ಇರಬೇಕು. ಆದರೆ ಪ್ರಸ್ತುತ ಪತ್ರಿಕೆಗಳಲ್ಲಿ ಇದು ಅಕ್ಷರಗಳಿಗಿಂತಲೂ ಗಾಢವಾಗಿ ಕಾಣಿಸುತ್ತಿದೆ. ಇದರಿಂದ ಪ್ರಶ್ನೆಯನ್ನು ಸರಿಯಾಗಿ ಗುರುತಿಸಲು ವಿದ್ಯಾರ್ಥಿಗಳು ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ, ಇದರಿಂದ ನಿಗದಿತ ಸಮಯದಲ್ಲಿ ಉತ್ತರ ಬರೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ವಿಶೇಷವಾಗಿ ರೇಖಾಗಣಿತದ ಚಿತ್ರಗಳು ಮತ್ತು ಸಂಖ್ಯಾಶಾಸ್ತ್ರದ ಕೋಷ್ಟಕಗಳ ಮೇಲೆ ಈ ಕೋಡ್‌ಗಳು ಬಂದಾಗ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದಾರೆ.

ಈ ಬಾರಿ ಈ ಎಡವಟ್ಟು ಸರಿಪಡಿಸಲು ಅಸಾಧ್ಯ ಮುಂದಿನ ಪರೀಕ್ಷಗಳಿಗಾದರೂ ಈ ಸಮಸ್ಯೆಯನ್ನು ಸರಿಪಡಿಸಲೇ ಬೇಕು ಎನ್ನುವುದು ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಒತ್ತಾಯವಾಗಿದೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page