ಸಾಸ್ತಾನ: ಇಲ್ಲಿನ ಟೋಲ್ ಪ್ಲಾಜಾದಲ್ಲಿ ಗಣರಾಜ್ಯೊತ್ಸವದಂದು ಯುದ್ದದಲ್ಲಿ ಗಾಯಗೊಂಡ ಸೈನಿಕನಿಗೆ ಅವಮಾನ ಮಾಡಿರುವ ಘಟನೆ ವರದಿಯಾಗಿದೆ.
ಸಾಸ್ತಾನದ ಟೋಲ್ ಮೂಲಕ ಸಾಗುತ್ತಿದ್ದ ವೇಳೆ ಅವರಲ್ಲಿ ಟೋಲ್ ವಿನಾಯಿತಿ ಬಗ್ಗೆ ಪತ್ರವಿದ್ದರೂ, ಟೋಲ್ ವಿನಾಯಿತಿ ನೀಡುವುದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಶ್ಯಾಮರಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದು, ದೇಶದ ಎಲ್ಲಾ ಟೋಲ್ಗೇಟ್ಗಳಲ್ಲಿ ವಿನಾಯಿತಿ ನೀಡಿದ್ದಾರೆ. ಆದರೆ ಸಾಸ್ತಾನ ಟೋಲ್ ನಲ್ಲಿ ವಿನಾಯಿತಿ ನೀಡುವುದಿಲ್ಲ ಎನ್ನುತ್ತಿದ್ದಾರೆ. ಇವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್ನಲ್ಲಿ Lieutenant Colonel ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪೋಸ್ಟಿಂಗ್ಗಾಗಿ ಅವರು ತೆರಳುತ್ತಿದ್ದು, ಅದಕ್ಕೆ ಸಂಬಂಧಿತ ಆರ್.ಎಮ್.ಎ ನೀಡಿದ ಟೋಲ್ ವಿನಾಯಿತಿ ಲೆಟರ್ ತೋರಿಸಿದರೂ ಅವರು ವಿನಾಯಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಬಳಿಕ ಟೋಲ್ ಸಿಬ್ಬಂದಿ ತನ್ನ ತಪ್ಪನ್ನು ಅರಿತು ಅವರಲ್ಲಿ ಕ್ಷಮೇಯಾಚಿಸಿದ್ದಾರೆ.
ಶ್ಯಾಮರಾಜ್ ಇವಿ 21ನೇ ಪ್ಯಾರಾ ಸ್ಪೇಶಲ್ ಫೋರ್ಸ್ನ ಪ್ಯಾರಾಟ್ರೂಪರ್ ಆಗಿದ್ದು, ಕಾಸರಗೋಡು ಜಿಲ್ಲೆಯವರು. “ಆಪರೇಶನ್ ಪರಾಕ್ರಮ್” ವೇಳೆ ಉಗ್ರರ ವಿರುದ್ಧ ಜಯ ಸಾಧಿಸಿ ವಾಪಾಸು ಬರುವ ವೇಳೆ ಇವರ ವಾಹನ ಲ್ಯಾಂಡ್ ಮೈನ್ಸ್ ಮೇಲೆ ಹರಿದ ಪರಿಣಾಮ, ಲ್ಯಾಂಡ್ ಮೈನ್ಸ್ ಸ್ಪೋಟಗೊಂಡು ಇವರ ವಾಹನ ಜಖಂ ಗೊಂಡಿತ್ತು. ಈ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿ ಇಬ್ಬರು ಸೈನಿಕರು ಬದುಕುಳಿದಿದ್ದರು. ಈ ಬದುಕುಳಿದ ಸೈನಿಕರಲ್ಲಿ ಶ್ಯಾಮರಾಜ್ ಕೂಡ ಒಬ್ಬರು. ಹದಿನೈದು ದಿನಗಳ ಕಾಲ ಕೋಮಾದಲ್ಲಿ ನಂತರ ಯಥಾ ಸ್ಥಿತಿಗೆ ಬಂದರೂ ಬೆನ್ನು ಮೂಳೆ ಸರಪಳಿಗೆ ಗಂಭೀರ ಗಾಯವಾದ ಹಿನ್ನೆಲೆ ಇವರು ಸಂಪೂರ್ಣ ವಿಕಲಾಂಗರಾದರು.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಗಣರಾಜ್ಯೋತ್ಸವ ದಿನದಂದು ನಿವೃತ್ತ ಸೈನಿಕನೋರ್ವನಿಗೆ ಮಾಡಿದ ಅವಮಾನದ ಬಗ್ಗೆ ಎಲ್ಲೇಡೆ ತೀವ್ರ ಆಕ್ರೋಶ್ ವ್ಯಕ್ತವಾಗುತ್ತಿದೆ.











