ಬ್ರಹ್ಮಾವರ, ಮಾರ್ಚ್ 2:
ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ನಡೆದ ಟಿವಿ ಟೆಕ್ನಿಷಿಯನ್ ಮತ್ತು ಕೃಷಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ರುಡ್‌ಸೆಟ್‌ನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರದ ಪ್ರಾಂಶುಪಾಲರು ಡಾ. ರಾಬರ್ಟ್ ರೋಡ್ರಿಗಸ್ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ತ್ವರಿತ ಯಶಸ್ಸಿನತ್ತ ಆತುರಪಡಬಾರದು. ಕೊರೋನಾ ಕಾಲದಲ್ಲಿ ನಾವು ಸಹಬಾಳ್ವೆಯ ಮೌಲ್ಯ ಹಾಗೂ ಜೀವನದ ನಿಜವಾದ ಅರ್ಥ ಕಲಿತಿದ್ದೇವೆ. ಹಣಕ್ಕಿಂತ ವ್ಯಕ್ತಿತ್ವ, ಶಿಸ್ತು, ಪ್ರಾಮಾಣಿಕತೆ ಮತ್ತು ದೃಢಸಂಕಲ್ಪವೇ ಮೌಲ್ಯಯುತವಾದವು. ಆರೋಗ್ಯಕರ ಬದಲಾವಣೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ; ಆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ,” ಎಂದು ಅವರು ಕರೆ ನೀಡಿದರು.
ಇನ್ನೋರ್ವ ಅತಿಥಿಯಾಗಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಎ.ಎಸ್.ಐ. ಲಕ್ಕಪ್ಪ ಮಾತನಾಡಿ, ಕೃಷಿಯ ಜೊತೆಗೆ ಉದ್ಯಮಶೀಲತೆಯ ತರಬೇತಿ ಶಿಬಿರಾರ್ಥಿಗಳಿಗೆ ಹೆಚ್ಚಿನ ಜಾಗೃತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಮಯ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗುವಂತೆ ಪ್ರೇರಣೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬೊಮ್ಮಯ್ಯ ಎಂ ಅವರು ಶಿಬಿರಾರ್ಥಿಗಳು ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ತರಬೇತಿ ಸಂದರ್ಭದಲ್ಲಿ ಪಡೆದ ಅನುಭವವನ್ನು ನಂದನ್, ಪ್ರತ್ಯಕ್ಷ ಶೆಟ್ಟಿ, ಜೋಸೆಫ್, ಸುನಂದಾ ಲಮಣಿ ಹಾಗೂ ಪ್ರಶಾಂತ್ ಹಂಚಿಕೊಂಡರು. ಅಂತಿಮವಾಗಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳು ಮತ್ತು ಟೂಲ್ ಕಿಟ್‌ಗಳು ವಿತರಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಉಪನ್ಯಾಸಕಿ ಚೈತ್ರ ಕೆ ನಿರೂಪಿಸಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಸಂತೋಷ್ ವಂದನೆ ಸಲ್ಲಿಸಿದರು.










