ಉಡುಪಿ, ಮಾರ್ಚ್ 04 :
ವಿಶ್ವ ಶ್ರವಣ ದಿನದ ಅಂಗವಾಗಿ ಮಂಗಳವಾರ ಉಡುಪಿ ನಾರ್ಥ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭವ್ಯ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ, ಕೆ.ಎಂ.ಸಿ ಮಣಿಪಾಲದ ಶ್ರವಣ ವಿಭಾಗ ಹಾಗೂ ಆತಿಥೇಯ ಸಂಸ್ಥೆಯಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ನಾರ್ಥ್ ಇವರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಅವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಅವರು “ಸಮುದಾಯದಿಂದ ಹಿಡಿದು ತರಗತಿ ಕೊಠಡಿಯವರೆಗೆ — ಎಲ್ಲ ಮಕ್ಕಳ ಶ್ರವಣದ ಕಾಳಜಿ” ಎಂಬ ವಿಶ್ವ ಶ್ರವಣ ದಿನದ ಥೀಮ್ ಕುರಿತು ಮಾತನಾಡಿ, “ಮಕ್ಕಳಲ್ಲಿ ಕಾಣುವ ಬಹುತೇಕ ಶ್ರವಣ ನಷ್ಟವು ತಡೆಗಟ್ಟಬಹುದಾದದ್ದಾಗಿದೆ. ಸರಿಯಾದ ಆರೈಕೆ ಮತ್ತು ಜಾಗೃತಿಯ ಮೂಲಕ ಮಕ್ಕಳ ಅರಿವು, ಅಧ್ಯಯನ ಸಾಮರ್ಥ್ಯ ಹಾಗೂ ಸಾಮಾಜಿಕ ಸಂವಹನವನ್ನು ಹೆಚ್ಚಿಸಬಹುದು. ಶ್ರವಣ ನಷ್ಟವನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.” ಎಂದರು.
ಶ್ರವಣ ತಜ್ಞರಿಂದ ಮಾರ್ಗದರ್ಶನ
ಕೆ.ಎಂ.ಸಿ ಮಣಿಪಾಲದ ಶ್ರವಣ ತಜ್ಞೆ ಸಮೀಕ್ಷಾ ಡಿ. ರಾವ್, ಮಕ್ಕಳಲ್ಲಿ ಕೇಳುವಿಕೆಯ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿ, ಮಗು ಸರಿಯಾಗಿ ಮಾತನಾಡಲು ಶ್ರವಣ ಸಾಮರ್ಥ್ಯ ಅತ್ಯಗತ್ಯ. ಮಕ್ಕಳು ಕಿವಿಗೆ ಕಡ್ಡಿ, ಪಿನ್ ಅಥವಾ ಸೂಜಿ ಮುಂತಾದ ಚೂಪಾದ ವಸ್ತುಗಳನ್ನು ಹಾಕದಂತೆ ಪೋಷಕರು ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಕಿವಿಯಲ್ಲಿ ಸಹಜವಾದ ಸ್ವಚ್ಛಗೊಳಿಸುವ ವಿಧಾನ ಇರುವುದರಿಂದ ಕಿವಿಯನ್ನು ಕಡ್ಡಿಯಿಂದ ಸ್ವಚ್ಛ ಮಾಡುವುದು ಅಪಾಯಕಾರಿ. ಸೀಳು ತುಟಿ ಹಾಗೂ ಸೀಳು ಅಂಗುಳ ಇರುವ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಶಸ್ತ್ರಚಿಕಿತ್ಸೆ ಅವಶ್ಯ. ಕಿವಿನೋವು, ಕಿವಿಯಲ್ಲಿ ಕೀವು ಅಥವಾ ತುರಿಕೆ ಕಂಡುಬಂದ ಕ್ಷಣದಲ್ಲೇ ಇಎನ್‌ಟಿ ತಜ್ಞರನ್ನು ಸಂಪರ್ಕಿಸಬೇಕು. ದಡಾರ ಹಾಗೂ ರುಬೆಲ್ಲಾ ಲಸಿಕೆಗಳನ್ನು ಸರಿಯಾದ ವಯಸ್ಸಿನಲ್ಲಿ ನೀಡುವುದು ಅತ್ಯಗತ್ಯ. ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಬಸಪ್ಪ ಬೆನ್ನಪ್ಪನವರ್, ಕೆ.ಎಂ.ಸಿ ಮಣಿಪಾಲದ ಶ್ರವಣ ವಿಭಾಗದ ದಿಯಾ ಮತ್ತು ಆಂಡ್ರಿವ್, ಜೊತೆಗೆ ಶಾಲೆಯ ಸಹಶಿಕ್ಷಕ ವೃಂದದವರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಕೆ ಅವರು ಸ್ವಾಗತ ಕೋರಿ, ಸಹಶಿಕ್ಷಕ ಗುರು ಪ್ರಸಾದ್ ವಂದನೆ ಸಲ್ಲಿಸಿದರು.
85 ಮಕ್ಕಳಿಗೆ ಉಚಿತ ಶ್ರವಣ ತಪಾಸಣೆ
ಕಾರ್ಯಕ್ರಮದ ಅಂಗವಾಗಿ ನಾರ್ಥ್ ಶಾಲೆಯ 85 ವಿದ್ಯಾರ್ಥಿಗಳಿಗೆ ಉಚಿತ ಶ್ರವಣ ತಪಾಸಣೆ ನಡೆಸಲಾಯಿತು. ತಪಾಸಣೆಯ ಬಳಿಕ ತಜ್ಞರು ಪ್ರತೀ ಮಗುವಿನ ಸ್ಥಿತಿಗೆ ಅನುಗುಣವಾಗಿ ಅಗತ್ಯ ಸಲಹೆಗಳು ಮತ್ತು ಮುಂದಿನ ಕ್ರಮಗಳನ್ನು ನೀಡಿದರು.










