ಕುಂದಾಪುರ: ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯ ಸಾಗಿನಗುಡ್ಡೆ ಬಸ್ ನಿಲ್ದಾಣದ ಬಳಿ ಫೆಬ್ರವರಿ 24ರ ಮಂಗಳವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಹೊಸಮಠ ಪೋಸ್ಟ್‌ನ ಕೊರ್ಗಿ ಗ್ರಾಮದ ನಿವಾಸಿ ಪ್ರತಾಪ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಬ್ರಹ್ಮಾವರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 8:30ರ ವೇಳೆಗೆ ಬ್ರಹ್ಮಾವರದಿಂದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಕೂಟರ್ ಸ್ಕೀಡ್ ಆದ ಸಂದರ್ಭ ವಾಹನದಲ್ಲಿದ್ದ ಕೃಷಿ ಉಪಕರಣಗಳು ಬಲವಾಗಿ ತಲೆಗೆ ಬಡಿದ ಪರಿಣಾಮ ಗಂಭೀರ ಗಾಯವಾಗಿದೆ. ತೋಡಿನಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರಾದ ಪ್ರಕಾಶ್ ಶೆಟ್ಟಿಯವರು ಮೃತರ ಸಂಬಂಧಿಕರಾದ ರತ್ನಾಕರ ಶೆಟ್ಟಿಯವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದು, ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










