ಚೇಂಪಿಯಲ್ಲಿ ಸುಳಿದಾಡಿದ ಶಾರ್ದೂಲ: ಭಯಭೀತರಾದ ಜನ

February 12, 2026 11:05 PM

ಸಾಲಿಗ್ರಾಮ, ಫೆಬ್ರವರಿ 12:
ಇಲ್ಲಿಗೆ ಸಮೀಪದ ಚೇಂಪಿ ಹಾಲು ಡೈರಿ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಸಂಚಾರದ ಶಂಕೆ ಇತ್ತಾದರೂ, ಗುರುವಾರ ಇದು ಅಧಿಕೃತವಾಗಿ ದೃಢಪಟ್ಟಿದೆ.

ಘಟನೆಯ ವಿವರ:

ಸ್ಥಳೀಯರ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ಚಿರತೆಯು ಮೊದಲು ರವೀಂದ್ರ ಉಪಾಧ್ಯ ಎಂಬುವವರ ಮನೆಯ ಸಮೀಪದಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಇದಾದ ಕೆಲವೇ ಕ್ಷಣಗಳಲ್ಲಿ, ಸ್ವಲ್ಪ ದೂರದಲ್ಲಿರುವ ಮನೆಯೊಂದರ ಸಮೀಪದಲ್ಲಿ ಆಟವಾಡುತ್ತಿದ್ದ ಮಕ್ಕಳು ಮರಳು ರಾಶಿಯ ಮೇಲೆ ಚಿರತೆ ಮಲಗಿರುವುದನ್ನು ಗಮನಿಸಿ ಭಯದಿಂದ ಕಿರುಚಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ದೊಡ್ಡವರು ಬರುವಷ್ಟರಲ್ಲಿ ಚಿರತೆಯು ಅಲ್ಲಿಂದ ಪರಾರಿಯಾಗಿದೆ.

ಅರಣ್ಯ ಇಲಾಖೆಯ ತಪಾಸಣೆ ಮತ್ತು ದೃಢೀಕರಣ:

ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಮರಳು ರಾಶಿ ಮತ್ತು ಸುತ್ತಮುತ್ತಲಿನ ಮಣ್ಣಿನಲ್ಲಿ ಚಿರತೆಯ ಪಾದದ ಅಚ್ಚುಗಳು (Pugmarks) ಪತ್ತೆಯಾಗಿವೆ. ಇದನ್ನು ಆಧರಿಸಿ ಅರಣ್ಯ ಇಲಾಖೆಯು ಚಿರತೆಯ ಉಪಸ್ಥಿತಿಯನ್ನು ದೃಢಪಡಿಸಿದೆ.

ಸಹಾಯಕ ಅರಣ್ಯಾಧಿಕಾರಿ ವಾಸಿಮ್ ಶೇಖ್ ನ್ಯೂಸ್‌ ರೇಸ್‌ ಜೊತೆ ಈ ಕುರಿತು ಮಾತನಾಡಿ:

“ಪ್ರಸ್ತುತ ಚಿರತೆಗಳ ಮಿಲನ ಕಾಲ (Mating Season) ಆಗಿರುವುದರಿಂದ, ಸಂಗಾತಿಯನ್ನು ಹುಡುಕಿಕೊಂಡು ಚಿರತೆಯು ಕಾಡಿನಿಂದ ನಾಡಿಗೆ ಬಂದಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಚಿರತೆಗಳು ಒಂದು ಪರಿಸರದಲ್ಲಿ ಕಂಡರೆ ಕನಿಷ್ಠ ಮೂರು ದಿನಗಳ ಕಾಲ ಅದೇ ಭಾಗದಲ್ಲಿ ವಾಸ್ತವ್ಯ ಹೂಡುತ್ತವೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.”


ಮುಂಜಾಗ್ರತಾ ಕ್ರಮಗಳು ಮತ್ತು ಮುಂದಿನ ಹಂತ:

ಸ್ಥಳೀಯರ ಆತಂಕವನ್ನು ಹೋಗಲಾಡಿಸಲು ಅರಣ್ಯ ಇಲಾಖೆಯು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

  • ಬೋನು ಅಳವಡಿಕೆ: ಚಿರತೆಯನ್ನು ಸೆರೆಹಿಡಿಯಲು ಶುಕ್ರವಾರ ಸ್ಥಳದಲ್ಲಿ ಬೋನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಎಚ್ಚರಿಕೆ ಸಂದೇಶ: ಚೆಂಪಿ ಪರಿಸರವು ಜನನಿಬಿಡ ಪ್ರದೇಶವಾಗಿರುವುದರಿಂದ, ರಾತ್ರಿ ವೇಳೆ ಜನರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು.
  • ಮನೆಬಾಗಿಲು ಭದ್ರಪಡಿಸಿ: ರಾತ್ರಿಯ ಸಮಯದಲ್ಲಿ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಸರಿಯಾಗಿ ಮುಚ್ಚಿಟ್ಟುಕೊಳ್ಳುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಸಾರ್ವಜನಿಕ ಗಮನಕ್ಕೆ: ಈ ಪರಿಸರದಲ್ಲಿ ಚಿರತೆಯ ಸಂಚಾರದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಸಿಕ್ಕಲ್ಲಿ ಅಥವಾ ಅದನ್ನು ಕಂಡಲ್ಲಿ ತಕ್ಷಣವೇ ಅರಣ್ಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ತಿಳಿಸಿ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page