ಬಾರ್ಕೂರು: ಇಲ್ಲಿನ ದೇವಾಡಿಗ ಸಮಾಜದ ಕುಲದೇವಿಯಾದ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ 2026ರ ಸಾಲಿನ ವಾರ್ಷಿಕ ವರ್ಧಂತ್ಯುತ್ಸವವು ಫೆಬ್ರವರಿ 15 ರಿಂದ ಫೆಬ್ರವರಿ 19 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜನಾರ್ದನ ಪಡುಪಣಂಬೂರು ತಿಳಿಸಿದರು.
ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆಬ್ರವರಿ 15 (ಭಾನುವಾರ): ವರ್ಧಂತ್ಯುತ್ಸವದ ಅಂಗವಾಗಿ ಉಡುಪಿಯಿಂದ ಶ್ರೀ ದೇವಿಯ ಸನ್ನಿಧಿಗೆ “ನಮ್ಮ ನಡಿಗೆ ಅಮ್ಮನೆಡೆಗೆ” ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 17 (ಮಂಗಳವಾರ): ಮಧ್ಯಾಹ್ನ 3.30ಕ್ಕೆ ದೇವಸ್ಥಾನದ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ಮತ್ತು ಸಮಾಜ ಬಾಂಧವರಿಂದ ಭವ್ಯವಾದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯು ಬಾರ್ಕೂರು ಸೇತುವೆಯ ಬಳಿಯಿಂದ ಪ್ರಾರಂಭಗೊಂಡು ವಾಹನ ಮತ್ತು ಕಾಲ್ನನಡಿಗೆಯ ಮೂಲಕ ದೇವಸ್ಥಾನವನ್ನು ತಲುಪಲಿದೆ.
ಫೆಬ್ರವರಿ 18 (ಬುಧವಾರ): ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಕ್ತಾದಿಗಳಿಂದ ನಿರಂತರ ಭಜನಾ ಕಾರ್ಯಕ್ರಮ.
ಫೆಬ್ರವರಿ 19 (ಗುರುವಾರ): ಬೆಳಿಗ್ಗೆ 9.00 ಗಂಟೆಗೆ ಸಾಮೂಹಿಕ ಚಂಡಿಕಾಯಾಗ, 10.00 ಗಂಟೆಯಿಂದ ವಧು-ವರರ ನೋಂದಣಿ ಮತ್ತು ಮಾಹಿತಿ ಕೇಂದ್ರ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 1.00 ಗಂಟೆಗೆ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಬ್ರಹ್ಮಕುಂಭಾಭಿಷೇಕ:
ಈ ವಾರ್ಷಿಕ ವರ್ಧಂತ್ಯುತ್ಸವದ ಮುಂದುವರಿದ ಭಾಗವಾಗಿ ಮಾರ್ಚ್ 02, 2026ರ ಸೋಮವಾರದಂದು ನವೋತ್ತರ ಶತ 109 ಬ್ರಹ್ಮಕುಂಭಾಭಿಷೇಕ, ಪೂರ್ಣಾಹುತಿ ಮತ್ತು ಮಹಾಪೂಜೆಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ಉಪಾಧ್ಯಕ್ಷ ಯಾದವ ದೇವಾಡಿಗ ತಿಳಿಸಿದರು.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಉಪಾಧ್ಯಕ್ಷರಾದ ಸುರೇಶ್ ಶೇರಿಗಾರ್ (ಕೊಡವೂರು), ಚಿನ್ನಪ್ಪ ಮೊಯಿಲಿ, ಕೋಶಾಧಿಕಾರಿ ನಾರಾಯಣ ದೇವಾಡಿಗ ಮತ್ತು ಜಂಟಿ ಕಾರ್ಯದರ್ಶಿ ಶ್ರೀ ವಿ. ರಾಜು ದೇವಾಡಿಗ ಉಪಸ್ಥಿತರಿದ್ದರು.











