ಕುಂದಾಪುರ, ಫೆಬ್ರವರಿ 11:
ಹಿರಿಯ ಸಾಹಿತಿ, ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಇಂದು ಸಂಜೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
1946ರರ ಅಗಸ್ಟ್ 30ರಂದು ಜನಿಸಿದ ಅವರು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಣಿ ಗ್ರಾಮದವರು, ಕೇವಲ ಬರಹಗಾರರಷ್ಟೇ ಅಲ್ಲದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿದ್ದರು.
ಕುಂದಾಪುರದ ಜನಪ್ರಿಯ ಪತ್ರಿಕೆಯಾದ ‘ಕುಂದಪ್ರಭ’ದಲ್ಲಿ 3 ದಶಕಗಳ ಕಾಲ ಅಂಕಣಕಾರರಾಗಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಗಂಗೋಳ್ಳಿಯ ಎಸ್.ವಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಭಾಷಣಕಾರರಾಗಿ, ನಾಟಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಅವರು, ಮಂಗಳೂರು ಆಕಾಶವಾಣಿಯ ಚಿಂತನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಇಲ್ಲಿಯವರೆಗೆ 10ಕ್ಕೂ ಹೆಚ್ಚುಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಮುಖವಾದವುಗಳು ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನಂದ, ಸಂಜೆಗತ್ತಲಲ್ಲಿ ಬಕುಳವೃಕ್ಷ, ಕಲ್ಪನೆಯ ಕಡಲು, ಹಳೆ ತಲೆಮಾರಿನವರು ಮೊದಲಾದವು ಇವರ ಪ್ರಮುಖ ಕೃತಿಗಳು. 2023ರಲ್ಲಿ ಗಂಗೊಳ್ಳಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಂಚಗಂಗಾವಳಿ ಸರ್ವಾಧ್ಯಕ್ಷ ರಾಗಿದ್ದರು. ಹಾಗೆಯೇ ಕುಂದಪ್ರಭ ಕೊಡಮಾಡುವ ಕೋ.ಮ ಕಾರಂತ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಮೃತರು ಪತ್ನಿ ಕುಸುಮಾ ಕಾರಂತ, ಪುತ್ರಿ ವಿದ್ಯಾ ಕಾದಂಬರಿಯವರನ್ನು ಮತ್ತು ಅಪಾರ ಬಂಧು ಬಳಗ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.











