ಕುಂದಾಪುರ: ಕಂಡ್ಲೂರು ಸೇತುವೆ ಬಳಿ ಅಕ್ರಮ ಮರಳುಗಾರಿಕೆ ಮೇಲೆ ಪೊಲೀಸ್ ದಾಳಿ; 10 ಮಂದಿ ಬಂಧನ, 4 ದೋಣಿ ವಶ

February 10, 2026 10:35 PM

ಕುಂದಾಪುರ, ಫೆಬ್ರವರಿ 10:
ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ದಂಧೆಯ ಮೇಲೆ ಕುಂದಾಪುರ ವೃತ್ತ ನಿರೀಕ್ಷಕರು ಮಿಂಚಿನ ದಾಳಿ ನಡೆಸಿದ್ದು, ಹತ್ತು ಮಂದಿ ಕಾರ್ಮಿಕರನ್ನು ಬಂಧಿಸಿ, ಮರಳು ತುಂಬಿದ್ದ ನಾಲ್ಕು ದೋಣಿಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಫೆಬ್ರವರಿ 10ರಂದು ಬೆಳಗಿನ ಜಾವ ಸುಮಾರು 2:00 ಗಂಟೆಯ ಹೊತ್ತಿಗೆ ಕಂಡ್ಲೂರು ಸೇತುವೆಯ ಕೆಳಭಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕುಂದಾಪುರ ವೃತ್ತದ ಪೊಲೀಸ್ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಮತ್ತು ತಂಡದವರು ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ಆರೋಪಿಗಳು ದೋಣಿಯನ್ನು ಪೊದೆಯ ಬಳಿ ನಿಲ್ಲಿಸಿ ಅಡಗಿಕೊಳ್ಳಲು ಪ್ರಯತ್ನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಹಳ್ನಾಡು ಕೆ.ಆರ್.ಐ.ಡಿ.ಎಲ್ (KRIDL) ಮರಳು ಧಕ್ಕೆಯ ಮೂಲಕ ದೋಣಿಯಲ್ಲಿ ತೆರಳಿ ಆರೋಪಿಗಳನ್ನು ಸುತ್ತುವರಿದು 10 ಮಂದಿ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ರಾಮಶಂಕರ ರಾಜಬೀರ್(35), ರಾಮ ಕುಮಾರ್ (40), ಗೋವಿಂದ ಚೌದರಿ(26), ಶಿವಮುನಿ(32), ಜುನ್ನ ರಾಜಬೀರ್(35), ಸತ್ಯಾದೇವ(30), ಕಮಲೇಶ ನಿಸಾದ್(35), ಸಂತೋಷ ನಿಸಾದ್(23), ಓಂ ಪ್ರಕಾಶ ರಾಜಬರ್(34), ರಮೇಶ ರಾಜಬರ್(35) ಒಟ್ಟು 10 ಮಂದಿ ಎಂದು ಗುರುತಿಸಲಾಗಿದೆ. ಇವರು ಹಳ್ನಾಡು KRIDL ಮರಳು ಧಕ್ಕೆಯ ದಿನಗೂಲಿ ಕಾರ್ಮಿಕರಾಗಿದ್ದಾರೆ.

ವಿಚಾರಣೆಯ ವೇಳೆ, ಧಕ್ಕೆಯ ಮಾಲೀಕ ಸುನಿಲ್ ಶೆಟ್ಟಿ ಹಾಗೂ ಸೂಪರ್‌ವೈಸರ್ ಅಜ್ಮಲ್ ಅವರು ಹೆಚ್ಚಿನ ಹಣದ ಆಸೆ ತೋರಿಸಿ, ಜಿಯೋ ಫೆನ್ಸಿಂಗ್ ಬೌಂಡರಿ ದಾಟಿ ಉತ್ತಮ ದರ್ಜೆಯ ಮರಳು ತರುವಂತೆ ಸೂಚಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ನಿಯಮಬಾಹಿರ ಎಂದು ತಿಳಿದಿದ್ದರೂ ಮಾಲೀಕರು ಈ ಕೃತ್ಯಕ್ಕೆ ಪ್ರಚೋದನೆ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದಾಳಿಯ ವೇಳೆ ಸುಮಾರು 3 ಲಕ್ಷ ರೂ. ಮೌಲ್ಯದ ಕೆಳಗಿನ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ‘ಮಹಾಗಣಪತಿ-2’, ‘ಚೇತನ್’, ‘ಸಮೃದ್ದಿ-2’ ಹೆಸರಿನ ಹಾಗೂ ಹೆಸರಿಲ್ಲದ ತಲಾ 75,000 ರೂ. ಮೌಲ್ಯದ ಒಟ್ಟು 4 ದೋಣಿಗಳು. ದೋಣಿಗಳಲ್ಲಿದ್ದ ಸುಮಾರು 3.5 ಯೂನಿಟ್ ಮರಳು. ಮರಳು ತೆಗೆಯಲು ಬಳಸುತ್ತಿದ್ದ ಬಿದಿರಿನ ತೊಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026 ರಂತೆ, ಹೊಸ ಕಾನೂನು BNS ಕಲಂ 303(2), 3(5) ಹಾಗೂ MMDR ಕಾಯ್ದೆ ಮತ್ತು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page