ಮುನಿಯಾಲು, ಫೆಬ್ರವರಿ 10:
ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಬೆಸೆಯುವ ಅಪೂರ್ವ ಕಾರ್ಯಕ್ರಮಕ್ಕೆ ಮುನಿಯಾಲು ಸಾಕ್ಷಿಯಾಗಲಿದೆ. ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ ಫೆಬ್ರವರಿ 19, 20 ಮತ್ತು 21ರಂದು ಡಾ. ಜಿ. ರಾಮಕೃಷ್ಣ ಆಚಾರ್ ಹಾಗೂ ಕುಟುಂಬದವರ ಆಶ್ರಯದಲ್ಲಿ “ಏಕಪವಿತ್ರ ಶ್ರೀಮನ್ನಾಗಮಂಡಲ: ಪ್ರಕೃತಿಯಿಂದ ಪ್ರಕೃತಿಗೆ ಎಂಬ ಶೀರ್ಷಿಕೆಯಡಿ ಜರಗಲಿದೆ. ಜತೆಯಲ್ಲಿ ಕೃಷಿ ಮಂಡಲ ಕೃಷಿ ವಿಚಾರಗೋಷ್ಠಿ ಮತ್ತು ಪ್ರಥಮ ಜ್ಞಾನಪೀಠ ಮಾದರಿಯಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ನಡೆಯಲಿದೆ ಎಂದು ಸಂಜೀವಿನಿ ಫಾರ್ಮ್‌ನ ಪ್ರವರ್ತಕ ಡಾ. ಜಿ. ರಾಮಕೃಷ್ಣ ಆಚಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಮುಖ ಆಕರ್ಷಣೆ: ರೈತಪೀಠ ಪ್ರಶಸ್ತಿ ಪ್ರದಾನ
ರೈತರು ಕಾರ್ಪೊರೇಟ್ ಮಟ್ಟದ ಜೀವನ ನಡೆಸಬೇಕು ಮತ್ತು ಅವರ ತ್ಯಾಗಕ್ಕೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ‘ರೈತಪೀಠ ಪ್ರಶಸ್ತಿ’ ಸ್ಥಾಪಿಸಲಾಗಿದೆ. ಈ ಹಿನ್ನೆಲೆ ಫೆ.20ರಂದು ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ. ಪ್ರಪ್ರಥಮ ಬಾರಿಗೆ ಬತ್ತದ ತಳಿ ಸಂರಕ್ಷಕ ಪದ್ಮಶ್ರೀ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಜನತೆಗೆ ಕೃಷಿಯ ಖುಷಿಯನ್ನು ತಿಳಿಸುವ ಉದ್ದೇಶದಿಂದ ಕೃಷಿ ಮಂಡಲ ಕೃಷಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದ್ದು ಈ ವಿಚಾರಗೊಷ್ಠಿಯಲ್ಲಿ ನಾಡಿನ ಪ್ರಖ್ಯಾತ ಕೃಷಿ ತಜ್ಞರು ಭಾಗವಹಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಶ್ರೀನಿವಾಸ ಸಭಾಮಂಟಪದಲ್ಲಿ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.
ಗೋಷ್ಠಿಗಳು:
- “ಕರಾವಳಿ ಕೃಷಿ ಬಹುತ್ವ & ಧಾರ್ಮಿಕ ನಂಬಿಕೆಗಳು”
– ಡಾ. ನರೇಂದ್ರ ರೈ ದೇರ್ಲ - “ಯುವಜನತೆ ಮತ್ತು ಭವಿಷ್ಯದ ಕೃಷಿ ಸಾಧ್ಯತೆಗಳು”
– ನಿರಂಜನ ಪೊಳ್ಯ - “ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿ”
– ಪ್ರವೀಣ್ ಕೇಶವ್
ಈ ವಿಚಾರಗೋಷ್ಠಿಯಲ್ಲಿ ಚರ್ಚೆ ನಡೆಯಲಿದೆ. ಸಂಜೆ 5.00ರಿಂದ ರೈತಪೀಠ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾನೇರಿ ಸಿದ್ಧಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿಯ ಶ್ರೀ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿಯವ ದಿವ್ಯ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
“ರೈತಪೀಠ” ಇದು ಈ ನೆಲದ ಜ್ಞಾನ ಪೀಠ
ಸಂಜೀವಿನಿ ಗೋಧಾಮದ ಪ್ರವರ್ತಕರಾದ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಸಮಗ್ರ ಸಾಧನೆಯನ್ನು ದಾಖಲಿಸಿ, ಡಾ. ನರೇಂದ್ರ ಕುಮಾರ್ ದೇರ್ಲ ಇವರು ರಚಿಸಿರುವ ಕೃತಿ ರೈತಪೀಠ ಇದು ಈ ನೆಲದ ಜ್ಞಾನಪೀಠ ಇದರ ಲೋಕಾರ್ಪಣೆಯನ್ನು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೆರವೇರಿಸಲಿದ್ದಾರೆ.
ಫೆ. 21ರಂದು ಸಂಜೆ 5.00ಕ್ಕೆ ಸಭಾಮಂಡಲ ಜರಗಲಿದ್ದು, ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಅಂದು ಈ ಕಾರ್ಯಕ್ರಮದಲ್ಲಿ ಶಾಸಕರಾದ ಸುನೀಲ್‌ಕುಮಾರ್, ಖ್ಯಾತ ಅಂಕಣಕಾರರಾದ ರೂಪಾ ಅಯ್ಯರ್, ಆನೆಗುಂದಿ ಮಠದ ಅಧ್ಯಕ್ಷರಾದ ಶ್ರೀಧರ್ ಆಚಾರ್ಯ ವಡೆರಹೋಬಳಿ ಭಾಗವಹಿಸಲಿದ್ದಾರೆ. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಗಮಂಡಲ ಸೇವಾಸಮಿತಿಯ ಅಧ್ಯಕ್ಷರಾದ ಸಾಣೂರುಗುತ್ತು ದೇವಿಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ.
ಧಾರ್ಮಿಕ ವಿಧಿವಿಧಾನಗಳು:
ಕೊರಂಗ್ರಪಾಡಿಯ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಹಾಗೂ ಶ್ರೀ ವಾಸುದೇವ ಭಟ್ ಅವರ ಸಹಯೋಗದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಪಾತ್ರಿಗಳಾಗಿ ಶ್ರೀ ರಾಮಚಂದ್ರ ಕುಂಜಿತ್ತಾಯ ಹಾಗೂ ಶ್ರೀ ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯರು ಭಾಗವಹಿಸಲಿದ್ದಾರೆ. ಫೆ. 19 (ಗುರುವಾರ): ಬೆಳಿಗ್ಗೆ 8:30 ರಿಂದ ಧಾರ್ಮಿಕ ವಿಧಿವಿಧಾನಗಳ ಚಾಲನೆ, ಗಣಯಾಗ, ನವಗ್ರಹ ಯಾಗ, ಭಾಗವತ ಪಾರಾಯಣ ಆರಂಭ. ಫೆ. 20 (ಶುಕ್ರವಾರ): ಮೃತ್ಯುಂಜಯ ಹೋಮ, ಅಶ್ವಪೂಜೆ, ಚಕ್ರಬ್ಜಮಂಡಲ ಪೂಜೆ.ಫೆ. 21 (ಶನಿವಾರ): ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ 8:00ಕ್ಕೆ ಹಾಲಿಟ್ಟು ಸೇವೆ ಹಾಗೂ ಶ್ರೀಮನ್ನಾಗಮಂಡಲ ಸೇವೆ. ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಫೆ. 20, ಮಧ್ಯಾಹ್ನ 3:30ಕ್ಕೆ: ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ರವಿಚಂದ್ರ ಕನ್ನಡಿಕಟ್ಟೆ ಬಳಗದಿಂದ ಯಕ್ಷ ʼಗಾನ ವಲ್ಲರಿ’. ಅಂದು ಸಂಜೆ 7.00ರಿಂದ ಪಂ. ವೆಂಕಟೇಶ್ ಕುಮಾರ್ ಮತ್ತು ಬಳಗದವರಿಂದ ಸಂಕೀರ್ತನ ಸುರಭಿ ಜರಗಲಿದೆ.
ಫೆ.21ರಂದು ಬೆಳಗ್ಗೆ 10.00ರಿಂದ ಸಂಜೆ 4.00ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಮಂಡಲ ಜರಗಲಿದೆ. ಸಂಜೆ 7.00ರಿಂದ ನೃತ್ಯನಿಕೇತನ ಕೊಡವೂರು ಇವರಿಂದ ನೃತ್ಯಸಿಂಚನ ಜರಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಾಗಮಂಡಲ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ರಕ್ಷಿತ್ ಆಚಾರ್ ಹಾಗೂ ಸವಿತಾ ಆರ್. ಆಚಾರ್ ಉಪಸ್ಥಿತರಿದ್ದರು.
“ಯಾವುದೇ ಆಡಂಭರವಿಲ್ಲದೆ ಸ್ವಾಭಾವಿಕ ಬಣ್ಣಗಳಿಂದ, ಸಾಂಪ್ರದಾಯಿಕ ಶೈಲಿಯ ವಾದ್ಯಗಳಿಂದ, ದೊಂದಿ ಬೆಳಕಿನಲ್ಲಿ ಈ ನಾಗಮಂಡಲವನ್ನು ಆಯೋಜಿಸಲಾಗಿದ್ದು, 25000 ಮಂದಿ ಈ ಮಂಡಲದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಸಾದ ರೂಪದಲ್ಲಿ ಶ್ರೀ ನಾಗದೇವರ ಮೃತ್ತಿಕೆಯಲ್ಲಿ ತಯಾರಿಸಿದ ಬೀಜದುಂಡೆ ವಿತರಿಸಲಾಗುವುದು. ಶ್ರೀ ನಾಗದೇವರಿಗೆ ಪ್ರಿಯವಾದ ಹಿಂಗಾರವನ್ನು ಕೇವಲ 1000ಸಾವಿರ ಹಾಳೆಗಳಿಗೆ ಮಿತಿಗೊಳಿಸಿ , ಪ್ರಸಾದವಾಗಿ ಅಡಿಕೆ ಸಸಿಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು. ಈ ಮೂಲಕ ಪ್ರಕೃತಿ, ರೈತ ಮತ್ತು ಸನಾತನ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಉದ್ದೇಶವನ್ನು ಹೊಂದಿದೆ”
– ರಾಮಕೃಷ್ಣ ಆಚಾರ್ಯ, ಪ್ರವರ್ತಕರು, ಗೋಧಾಮ ಮುನಿಯಾಲು











