ಕುಂದಾಪುರ:ರಾಜಕೀಯ ಮುತ್ಸದಿ, ಧಾರ್ಮಿಕ ಮುಂದಾಳು ಶ್ರೀ ಅಪ್ಪಣ್ಣ ಹೆಗ್ಡೆ ಬಸ್ರೂರು ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ್ದ ಅವರು, ಬಳಿಕಸಕ್ರಿಯ ರಾಜಕೀಯದಿಂದ ಹಿಂದೆ ಸರಿದು ಧಾರ್ಮಿಕ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ವಲಯದಲ್ಲಿ ಒಬ್ಬರಾಗಿದ್ದ ಇವರು, ಧರ್ಮಸ್ಥಳದ ಯಾವುದೇ ಕಾರ್ಯವನ್ನು ಶ್ರೀ ಮಂಜುನಾಥ ಸ್ವಾಮಿಯ ಕಾರ್ಯವೆಂದೆ ಮಾಡುತ್ತಿದ್ದರು. ಕುಂದಾಪುರ ಪರಿಸರದಲ್ಲಿ ನಾಗಮಂಡಲ ಸೇರಿದಂತೆ ಯಾವುದೇ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಿದ್ದರೂ ಅಲ್ಲಿ ಅಪ್ಪಣ್ಣ ಹೆಗ್ಡೆಯವರ ಅಧ್ಯಕ್ಷತೆ ಅಥವಾ ಗೌರವಾಧ್ಯಕ್ಷತೆ ಇತ್ತು. ಇಳಿ ವಯಸ್ಸಿನವರೆಗೂ ಚುರುಕುತನದಲ್ಲಿ ತಮ್ಮನ್ನು ತಾವು ಸಮಾಜದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ 90 ರ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು.
ಮೃತರು ಮೂವರು ಪುತ್ರಿಯರು ಇಬ್ಬರು ಪುತ್ರರನ್ನು ಅಗಲಿದ್ದಾರೆ.










