ಕೋಟ, ಜನವರಿ 27:
ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಪ್ಯಾರಾ ಕಮಾಂಡೋಗೆ ಟೋಲ್ ವಿನಾಯಿತಿ ಪತ್ರವಿದ್ದರೂ ಅವಮಾನಿಸಿದ ಘಟನೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತ್ತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕು ಎಂದು ನಿವೃತ್ತ ಸೈನಿಕರು ಆಗ್ರಹಿಸಿ ದೂರು ದಾಖಲಿಸಿದ್ದಾರೆ.
ಜನವರಿ 25ರಂದು ರಾತ್ರಿ ಸುಮಾರು 9.30ರ ವೇಳೆ ಈ ಘಟನೆ ನಡೆದಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೀಡಿಯೋ ಹರಿದಾಡಿದೆ. ಈ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದ ಬಳಿಕ ನಿವೃತ್ತ ಸೈನಿಕರ ಸಂಘ ದೂರು ಕೊಡುವ ನಿರ್ಧಾರಕ್ಕೆ ಬಂದಿದೆ.
ಲ್ಯಾಂಡ್‌ಮೈನ್ ಸ್ಫೋಟದಿಂದ ಬದುಕುಳಿದ ಯೋಧನಿಗೆ ಅವಮಾನ
ಕಾಸರಗೋಡು ಮೂಲದ ಶ್ಯಾಮರಾಜ್ ಅವರು ಅಪರೇಶನ್ ಪರಾಕ್ರಮ ವೇಳೆ ಉಗ್ರರ ವಿರುದ್ಧ ನಡೆದ ಮಹತ್ವದ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ತಿರುಗಿಬರುತ್ತಿದ್ದಾಗ ಅವರ ವಾಹನ ಲ್ಯಾಂಡ್‌ಮೈನ್ ಸ್ಫೋಟಕ್ಕೆ ಒಳಗಾಗಿದ್ದು, 15 ಸೈನಿಕರು ಹುತಾತ್ಮರಾದ ಭೀಕರ ಘಟನೆಯಲ್ಲಿ ಬದುಕುಳಿದ ಇಬ್ಬರಲ್ಲಿ ಶ್ಯಾಮರಾಜ್ ಕೂಡ ಒಬ್ಬರು. ಈ ಘಟನೆಯಲ್ಲಿ ಇವರ ಬೆನ್ನು ಹುರಿಗೆ ಗಂಭೀರ ಗಾಯವಾಗಿ ಜೀವನಪೂರ್ತಿ ವಿಕಲಾಂಗರಾಗಿದ್ದಾರೆ.
ಅವರ ಪತ್ನಿ ಮಿಲಿಟರಿ ನರ್ಸಿಂಗ್ ಸರ್ವಿಸ್ ಸೇವೆಯಲ್ಲಿದ್ದು ವರ್ಗಾವಣೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಾಸ್ತಾನ ಟೋಲ್ ಮೂಲಕ ಹೋಗುವಾಗ ಟೋಲ್ ವಿನಾಯತಿ ದಾಖಲೆ ಇದ್ದರೂ ಸಿಬ್ಬಂದಿ ಮನ್ನಣೆ ನೀಡದೆ ನಿಂದಿಸಿ ಅವಮಾನಿಸಿದ್ದರೆಂದು ದೂರಿದ್ದಾರೆ.
“ಸೈನಿಕರಿಗೆ ಅವಮಾನ = ದೇಶಕ್ಕೆ ಅವಮಾನ” – ಮಾಜಿ ಸೈನಿಕರ ಸಂಘ
“ದೇಶಕ್ಕಾಗಿ ಪ್ರಾಣ ಅರ್ಪಿಸಲು ಹಿಂಜರಿಯದ ಯೋಧರನ್ನು ಅವಹೇಳನ ಮಾಡುವುದು ರಾಷ್ಟ್ರವಿರೋಧಿ ನಡವಳಿಕೆ ಇವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಸೈನಿಕರ ಸಂಘ ಆಗ್ರಹಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಟೋಲ್ ಪ್ಲಾಝಾದ ಒಟ್ಟು ಆರು ಮಂದಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೈನಿಕರು ಆಗ್ರಹಿಸಿದ್ದಾರೆ.
ಆರು ಮಂದಿ ಸಿಬ್ಬಂದಿಗಳ ವಿರುದ್ಧ ದೂರು
ದೂರಿನಲ್ಲಿ ಕೆಳಗಿನವರ ವಿರುದ್ಧ ಕಾನೂನು ಕ್ರಮಕ್ಕೆ ಬೇಡಿಕೆಯಿದೆ:
- ಅಬ್ದುಲ್ ಜಾವೀದ್ – ಯೋಜನಾ ಪ್ರಾಧಿಕಾರ
- ಜಗನ್ ಮೋಹನ್ ರೆಡ್ಡಿ
- ಟೋಲ್ ಮ್ಯಾನೇಜರ್ ಬಾಬು
- ಟೋಲ್ ಮ್ಯಾನೇಜರ್ ತಿಮ್ಮಯ್ಯ
- ಸಿಬ್ಬಂದಿ ಸುರೇಶ್
- ಸಿಬ್ಬಂದಿ ಶಿವನಾಗ
ದೂರು ಸ್ವೀಕರಿಸಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಅವರು, ದೂರಿನಲ್ಲಿ ಉಲ್ಲೇಖಿಸಿರುವ ಕೆಲವು ಸೆಕ್ಷನ್‌ಗಳು ತಕ್ಷಣ FIR ದಾಖಲಿಸಲು ಸರಿಹೊಂದದ ಕಾರಣ ಮೊದಲ ಹಂತದಲ್ಲಿ ದೂರು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ, ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ದೂರುದಾರರಿಗೆ ಮಾಹಿತಿ ನೀಡಿದರು.
ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್, ಎಸ್ಐ ಮಾಂತೇಶ್ ಜಾಬಗೌಡ ಹಾಗೂ ಮಾಜಿ ಸೈನಿಕರು ಮತ್ತು ಸ್ಥಳೀಯ ಹೋರಾಟಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











