ಬ್ರಹ್ಮಾವರ: ಆಳ್ವಾಸ್ ನುಡಿಸಿರಿ ವಿರಾಸತ್ ಬ್ರಹ್ಮಾವರ ಘಟಕ ಮತ್ತು ಬ್ರಹ್ಮಾವರ ಫೌಂಡೇಶನ್ ವತಿಯಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಜ.27ರಂದು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರಗಲಿದೆ ಎಂದು ಬ್ರಹ್ಮಾವರ ಫೌಂಡೇಶನ್ ಅಧ್ಯಕ್ಷ ಬಿ. ಗೋವಿಂದರಾಜ್ ಹೆಗ್ಡೆ ಹೇಳಿದರು.
ಅವರು ಬ್ರಹ್ಮಾವರದ ಆಶ್ರಯ ಹೋಟೇಲ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 6.15ಕ್ಕೆ ಸರಿಯಾಗಿ , ಗಾಂಧಿಮೈದಾನದ ಬಿಬಿ ಶೆಟ್ಟಿ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಆರಂಭಗೊಳ್ಳಲಿದೆ. ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಹರಿರಾಮ್ ಶಂಕರ್ ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬೆಂಗಳೂರಿನ ಕುಂದಾಪುರ ಕನ್ನಡ ಪ್ರತಿಷ್ಠಾನದ ಉದಯ್ ಹೆಗ್ಡೆ, ಖ್ಯಾತ ಸಾಹಿತಿ ಹಾಗೂ ಚಿಂತಕರಾದ ಡಾ. ನೀಕೇತನ, ಜನತಾ ಫಿಶ್ ಮಿಲ್ಸ್ ಹಾಗೂ ಅಯಿಲ್ ಪ್ರಾಡಕ್ಟ್‌ನ ಮಾಲೀಕರಾದ ಆನಂದ ಸಿ. ಕುಂದರ್, ಆರೂರು ತಿಮ್ಮಪ್ಪ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಸ್ಥಾಪಕ ಅಧ್ಯಕ್ಷ ಅಶೋಕ್ ಭಟ್, ಉದ್ಯಮಿ ಬಾರಕೂರು ಶಾಂತಾರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಳ ಉಪಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಸುದರ್ಶನ ಹೆಗ್ಡೆ, ಶ್ರೀ ಕಚ್ಚೂರು ಮಾಲ್ತಿ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲದಾಸ್ ಬಾರಕೂರು, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ, ಜಿ.ಎಮ್. ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಪ್ರಕಾಶ್ಚಂದ್ರ ಶೆಟ್ಟಿ, ಬ್ರಹ್ಮಾವರ ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಯರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಸುದೇಶ್ ಹೆಗ್ಡೆ, ಬ್ರಹ್ಮಾವರ ಎಸ್.ಎಮ್.ಎಸ್.ಕೆಥೆಡ್ರಲ್ ಸಹಾಯಕ ಗುರುಗಳಾದ ರೆ|ಫಾ|ಡೇವಿಡ್ ಕ್ರಾಸ್ತಾ ಅಂದು ನಮ್ಮೊಂದಿಗೆ ಇರುವರು ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋಧ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿ ೫೦೦ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ – ಅಷ್ಪಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲ ಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ -ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನಜ – ಹಿರಣ್ಯಾಕ್ಷ ವಧೆ ಹಾಗೂ ಬೊಂಬೆ ವಿನೋದಾವಳಿ ಪ್ರದರ್ಶನಗೊಳ್ಳಲಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಈ ನೃತ್ಯ ಪ್ರಕಾರದಲ್ಲಿ ಹಲವು ಕಾರ್ಯಕ್ರಮಗಳು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ ಇದರಲ್ಲಿ ಹೊಸತನ ಏನಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ನೃತ್ಯ ಪ್ರಕಾರಗಳು ಹಿಂದಿನ ವಿರಾಸತ್‌ನಲ್ಲಿ ಇದ್ದವೇ ಆದರೂ ನೃತ್ಯವನ್ನು ವಿಭಿನ್ನವಾಗಿ ಸಂಯೋಜಿಸಲಾಗಿದೆ. ಈ ಬಾರಿ ಹೊಸ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ. ಸ್ಟಿಕ್ ಡ್ಯಾನ್ಸ್‌ನಲ್ಲಿ ಜಿಮ್ನಾಸ್ಟಿಕ್‌ನ್ನು ಅಳವಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ದಯಾನಂದ ಶೆಟ್ಟಿ ಹಾರಾಡಿ, ಮಡಾಮಕ್ಕಿ ಶಶಿಧರ ಶೆಟ್ಟಿ, ರಘುಪತಿ ಬ್ರಹ್ಮಾವರ, ಅಶೋಕ್ ಪೂಜಾರಿ ಹಾರಾಡಿ, ಗಣೇಶ್ ಶ್ರೀಯಾನ್, ವಸಂತ ಶೆಟ್ಟಿ, ಅಲ್ವಾರಿಸ್ ಡಿ’ಸಿಲ್ವಾ, ರಾಮಕೃಷ್ಣ ಇನ್ನಿತರರಿದ್ದರು.











