ಸಾಸ್ತಾನ: ಬ್ರಾಹ್ಮಣ ಸಂಸ್ಕಾರ ಎನ್ನುವುದು ಶ್ರೇಷ್ಠ ಸಂಸ್ಕಾರ ಅದನ್ನು ಬಾಲ್ಯದಲ್ಲೇ ಮಕ್ಕಳಿಗೆ ನೀಡಬೇಕು ಎಂದು ವಿಪ್ರ ವೇದಿಕೆ ಐರೋಡಿಯ ಅಧ್ಯಕ್ಷ ವಿಘ್ನೇಶ್ವರ ಅಡಿಗ ಹೇಳಿದರು.
ಅವರು ಬಾಳೆಕುದ್ರುವಿನ ರಾಮಮಂದಿರದಲ್ಲಿ ನಡೆದ ವಿಪ್ರವೇದಿಕೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಬಾಲ್ಯದಲ್ಲೇ ಮೊಬೈಲ್ ಕೊಟ್ಟು ಅವರನ್ನು ಪೋಷಕರು ಹಾಳು ಮಾಡುತ್ತಿದ್ದಾರೆ. ಅದರ ಬದಲು ಭಜನೆ ಪೂಜಾ ಕಾರ್ಯದಲ್ಲಿ ಜೊತೆಯಲ್ಲಿ ಕೂಡಿಸಿಕೊಂಡು ಅವರನ್ನು ಪೂಜಾ ಕಾರ್ಯದಲ್ಲಿ ಆಸಕ್ತರನ್ನಾಗಿ ಮಾಡಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಮಂಜ ಮಾತನಾಡಿ, ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಂಘಟನೆಗಳಲ್ಲಿ ಐರೋಡಿ ಬಾಳೆಕುದ್ರು ವಿಪ್ರವೇದಿಕೆ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ. ಇಂತಹ ಕಾರ್ಯಕ್ರಮಗಳು ನಮ್ಮನ್ನು ಸಂಘಟಿತರನ್ನಾಗಿ ಮಾಡುತ್ತದೆ. ಮುಂದೆಯೂ ಸಂಘಟನೆಯನ್ನು ಬಲಗೊಳಿಸುವ ಕೆಲಸವನ್ನು ಮಾಡಿ ಎಂದು ಸಲಹೆ ನೀಡಿದರು.
ವಿದ್ವಾನ್ ರವೀಂದ್ರ ಭಟ್ ಹೆರ್ಗ ಧಾರ್ಮಿಕ ಉಪನ್ಯಾಸ ನೀಡಿದರು. ನಿವೃತ್ತ ಅಧ್ಯಾಪಕ ಶ್ರೀನಿವಾಸ ಭಟ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ವನಿತಾ ಮಯ್ಯ, ಡಾಕ್ಟರೇಟ್ ಪುರಸ್ಕೃತ ಪ್ರೀತಮ್ ಅಡಿಗ ಇವರನ್ನು ಗೌರವಿಸಲಾಯಿತು.
ವೇದಿಯ ಗೌರವಾಧ್ಯಕ್ಷ ಹರೀಶ್ ಕುಮಾರ್ ಮಧ್ಯಸ್ಥ , ನಿಯೋಜಿತ ಅಧ್ಯಕ್ಷ ರಮೇಶ್ ಕಾರಂತ, ತಾಲೂಕು ಅಧ್ಯಕ್ಷ ಅಶೋಕ್ ಭಟ್ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಾಮದೇವರಿಗೆ ತುಳಸಿ ಅರ್ಚನೆ, ಮಹಿಳೆಯರಿಂದ ಲಲಿತಾ ಮತ್ತು ವಿಷ್ಣುಸಹಸ್ರನಾಮ ಪಾರಾಯಣ ಜರಗಿತು.











