ಮಣೂರು: ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಪಂಚಮುಖಿ ಹೇರಂಭ ಮಹಾಗಣಪತಿ ದೇವಸ್ಥಾನದ ಬ್ರಹ್ಮರಥೋತ್ಸವದ ಪ್ರಯುಕ್ತ, “ಮಣೂರು ಫ್ರೆಂಡ್ಸ್” ಸಂಘಟನೆಯು ತನ್ನ 25ನೇ ವರ್ಷದ ‘ರಜತ ಸಂಭ್ರಮ 2026’ ಅನ್ನು ಅತ್ಯಂತ ಸಡಗರದಿಂದ ಆಯೋಜಿಸಿದೆ.
ಈ ಭವ್ಯ ಸಮಾರಂಭವು ಏಪ್ರಿಲ್ 1, ಬುಧವಾರದಂದು ದೇವಸ್ಥಾನದ ವಠಾರದಲ್ಲಿ ಜರುಗಲಿದ್ದು, ಸಂಜೆ 6:30ಕ್ರಿಂಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಅಂಗನವಾಡಿ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ. ರಾತ್ರಿ 7:30ರಿಂದ: ಸಭಾ ಕಾರ್ಯಕ್ರಮ, ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ದತ್ತಿನಿಧಿ ವಿತರಣೆ. ರಾತ್ರಿ 9:00ರಿಂದ ಪ್ರಸಿದ್ಧ ಕಲಾವಿದರಿಂದ ‘ಡಾನ್ಸ್ ಧಮಾಕ’ ಮತ್ತು ಲೈವ್ ಕಾನ್ಸರ್ಟ್ (Live Concert) ನಡೆಯಲಿದೆ.
ಈ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಅವರು ಉದ್ಘಾಟಿಸಲಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಅವರು ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉದ್ಯಮಿಗಳಾದ ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಬಾರಿಯ ರಜತ ಸಂಭ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತಿದೆ. ವಿಶೇಷ ಗೌರವ ಪುರಸ್ಕಾರಕ್ಕೆ ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬ, ಸಾಧಕರ ಪುರಸ್ಕಾರಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ| ರವೀಂದ್ರ ಪೈ ಮಣೂರು. ಸಾಂಪ್ರದಾಯಿಕ ಕಂಬಳದ ಹರಿಕಾರರಾದ ರಘುರಾಮ ಶೆಟ್ಟಿ ಕಂಬಳಗದ್ದೆ ಹಾಗೂ ಕೃಷಿಕರಾದ ಶಿವರಾಮ ಶೆಟ್ಟಿ ನಡುಬೆಟ್ಟು. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ನಿಧಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಸಂಘಟನೆಯ ಗೌರವಾಧ್ಯಕ್ಷರಾದ ಸುರೇಶ್ ಆಚಾರ್ಯ, ಅಧ್ಯಕ್ಷರಾದ ರಾಘವೇಂದ್ರ ಜೆ. ಆಚಾರ್ಯ ಹಾಗೂ ಮಣೂರು ಫ್ರೆಂಡ್ಸ್‌ನ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.







