ಬ್ರಹ್ಮಾವರದ ಡಾ. ಸಂತೋಷ್ ಶೆಟ್ಟಿ ಸಾಲಿಕೇರಿಗೆ ಮುಖ್ಯಮಂತ್ರಿ ಚಿನ್ನದ ಪದಕದ ಗರಿ

March 28, 2026 8:30 PM

ಉಡುಪಿ: ಪೊಲೀಸ್ ಇಲಾಖೆಯಲ್ಲಿನ ದಕ್ಷ ಸೇವೆ ಹಾಗೂ ಪರಿಸರ ಕಾಳಜಿಯನ್ನು ಗುರುತಿಸಿ, ಮಲ್ಪೆಯ ಕರಾವಳಿ ಕಾವಲು ಪೊಲೀಸ್ (CSP) ಕೇಂದ್ರ ಕಚೇರಿಯ ಹೆಡ್ ಕಾನ್ಸ್‌ಟೇಬಲ್ ಡಾ. ಸಂತೋಷ್ ಶೆಟ್ಟಿ ಸಾಲಿಕೇರಿ ಅವರಿಗೆ 2025ನೇ ಸಾಲಿನ ರಾಜ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ ಘೋಷಣೆಯಾಗಿದೆ.

ವೃತ್ತಿ ಜೀವನದ ಹಾದಿ: ಬ್ರಹ್ಮಾವರದ ಸಾಲಿಕೇರಿಯ ದಿವಂಗತ ರಾಜೀವಿ ಶಕ್ತಿ ಅವರ ಪುತ್ರರಾದ ಸಂತೋಷ್ ಶೆಟ್ಟಿ ಅವರು 2000ನೇ ಇಸವಿಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿರುವ ಇವರು, ಪ್ರಸ್ತುತ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯ ವಾಹನ ವಿಭಾಗದಲ್ಲಿ ಬರಹಗಾರರಾಗಿ (Writer) ಸೇವೆ ಸಲ್ಲಿಸುತ್ತಿದ್ದಾರೆ.

ಖಾಕಿ ಜೊತೆ ಶೈಕ್ಷಣಿಕ ಸಾಧನೆ: ಕರ್ತವ್ಯದ ಒತ್ತಡದ ನಡುವೆಯೂ ಶೈಕ್ಷಣಿಕ ಸಾಧನೆ ಮುಂದುವರಿಸಿದ ಇವರು, 2022ರಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ ‘ಡಾಕ್ಟರೇಟ್’ (PhD) ಪದವಿಯನ್ನು ಪಡೆದುಕೊಂಡಿದ್ದಾರೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಉನ್ನತ ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆದ ಇವರ ಸಾಧನೆ ಸಹೋದ್ಯೋಗಿಗಳಿಗೆ ಪ್ರೇರಣೆಯಾಗಿದೆ.

ಪರಿಸರ ಪ್ರೇಮ ಮತ್ತು ಪ್ರಾಣಿ ಪಕ್ಷಿಗಳ ಪೋಷಣೆ: ಡಾ. ಸಂತೋಷ್ ಶೆಟ್ಟಿ ಅವರು ಕರಾವಳಿ ಕಾವಲು ಪೊಲೀಸ್ ಘಟಕದ ಆವರಣದಲ್ಲಿ ಕೈಗೊಂಡ ‘ಹಸಿರು ಕ್ರಾಂತಿ’ ಇಡೀ ಇಲಾಖೆಗೆ ಹೆಮ್ಮೆಯ ವಿಷಯ. ಬಂಜರು ಭೂಮಿಯಂತಿದ್ದ ಜಾಗದಲ್ಲಿ ಗಿಡಮರಗಳನ್ನು ಬೆಳೆಸಿ, ಪ್ರಾಣಿ-ಪಕ್ಷಿಗಳ ಸಾಕಾಣಿಕೆ ಹಾಗೂ ಪೋಷಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಲಾಖೆಯ ಆವರಣಕ್ಕೆ ಹೊಸ ಕಳೆ ತಂದಿದ್ದಾರೆ. ಇವರ ಈ ಪರಿಸರ ಸ್ನೇಹಿ ಕಾರ್ಯಕ್ಕಾಗಿ ದಿವಂಗತ ಮಧುಕರ ಶೆಟ್ಟಿ ಐಪಿಎಸ್ ಸ್ಮರಣಾರ್ಥ ಗೌರವ ಪುರಸ್ಕಾರ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಜನಪ್ರತಿನಿಧಿಗಳ ಪ್ರಶಂಸೆ: ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಉಡುಪಿ-ಚಿಕ್ಕಮಗಳೂರು ಸಂಸದರು, ಉಡುಪಿಯ ಶಾಸಕರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಲವು ಬಾರಿ ಶ್ಲಾಘಿಸಿದ್ದಾರೆ. ಸ್ಥಳೀಯ ಮಾಧ್ಯಮಗಳಲ್ಲದೆ ರಾಷ್ಟ್ರೀಯ ಮಟ್ಟದ ಮಾಧ್ಯಮಗಳೂ ಇವರ ವಿಶಿಷ್ಟ ಕಾರ್ಯವೈಖರಿಯನ್ನು ವರದಿ ಮಾಡಿವೆ.

ಈಗ ಲಭಿಸಿರುವ ಮುಖ್ಯಮಂತ್ರಿ ಚಿನ್ನದ ಪದಕವು ಇವರ ಎರಡೂವರೆ ದಶಕಗಳ ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಸಾರ್ವಜನಿಕರು ಹಾಗೂ ಇಲಾಖೆಯ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page