“ವ್ಯವಹಾರ ಕ್ಷೇತ್ರದ ಹೊಸ ಮಾದರಿಗಳು” ಕುರಿತು ಒಂದು ದಿನದ ಕಾರ್ಯಾಗಾರ
ಕೋಟೇಶ್ವರ: ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ – ಕೋಟೇಶ್ವರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ (IQAC) ಮತ್ತು ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ “ವ್ಯವಹಾರ ಕ್ಷೇತ್ರದ ಹೊಸ ಮಾದರಿಗಳು” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಲೋಕೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಅವರು ಸಮಕಾಲೀನ ವ್ಯವಹಾರ ಕ್ಷೇತ್ರದಲ್ಲಿ ರೂಪುಗೊಳ್ಳುತ್ತಿರುವ ವಿವಿಧ ಹೊಸ ಮಾದರಿಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ವ್ಯವಹಾರ ರಂಗದಲ್ಲಿ ಬದಲಾವಣೆಗಳು ನಿರಂತರ ಪ್ರಕ್ರಿಯೆಯಾಗಿದ್ದು, ಹೊಸ ವ್ಯವಹಾರ ಮಾದರಿಗಳ ಅನ್ವೇಷಣೆ ಹಾಗೂ ಈಗಿರುವ ಮಾದರಿಗಳಲ್ಲಿ ಆಗುವ ಬದಲಾವಣೆಗಳು ಅನೇಕ ಸವಾಲುಗಳನ್ನು ಸೃಷ್ಟಿಸುವುದರ ಜೊತೆಗೆ ಹೊಸ ಅವಕಾಶಗಳನ್ನೂ ತೆರೆದುಕೊಳ್ಳುತ್ತವೆ ಎಂದರು.
ಉದ್ಯಮ ರಂಗದಲ್ಲಿ ಆಗುವ ಈ ಬದಲಾವಣೆಗಳು ಉದ್ದಿಮೆದಾರರು, ಉದ್ಯೋಗಿಗಳು, ಗ್ರಾಹಕರು ಹಾಗೂ ಉದ್ಯೋಗಾಕಾಂಕ್ಷಿಗಳ ಜೀವನದ ಮೇಲೆ ವ್ಯಾಪಕ ಪ್ರಭಾವ ಬೀರುತ್ತವೆ. ವ್ಯವಹಾರ ಕ್ಷೇತ್ರದ ಕ್ರಿಯಾತ್ಮಕ ಬದಲಾವಣೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ನೂತನ ವ್ಯವಹಾರ ಮಾದರಿಗಳು ಹೇಗೆ ರೂಪುಕೊಳ್ಳುತ್ತವೆ, ಅವು ಉದಯಿಸಿದಾಗ ಹಿತಾಸಕ್ತಿದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅದರಿಂದ ದೊರಕುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಬುದ್ಧಿವಂತಿಕೆ ಅಗತ್ಯವೆಂದು ಡಾ. ಲೋಕೇಶ್ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮರಾಯ ಆಚಾರ್ಯ ಮಾತನಾಡಿ, ವ್ಯವಹಾರ ಕ್ಷೇತ್ರದಲ್ಲಿ ಬಹಳ ವೇಗವಾಗಿ ಹಾಗೂ ಮಹತ್ತರ ಬದಲಾವಣೆಗಳು ನಡೆಯುತ್ತಿವೆ ಎಂದರು. ನಗದು ವ್ಯವಹಾರದಿಂದ ಡಿಜಿಟಲ್ ವ್ಯವಹಾರಗಳಿಗೆ ಬದಲಾಗುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎದುರಾದ ಗೊಂದಲಗಳು, ಸವಾಲುಗಳು ಹಾಗೂ ಲಭ್ಯವಾದ ಅನುಕೂಲತೆಗಳನ್ನು ನಾವೆಲ್ಲ ಅನುಭವಿಸಿದ್ದೇವೆ ಎಂದು ಹೇಳಿದರು. ಹಿಂದಿನ ದಿನಗಳ ಪರಂಪರಾಗತ ಖರೀದಿ ಮಾದರಿಗಳಿಗೆ ಬದಲಾಗಿ ಇಂದು ಆನ್‌ಲೈನ್ ವ್ಯವಹಾರಗಳು ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿವೆ. ವ್ಯವಹಾರದ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣಕಯಂತ್ರಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಈ ಬದಲಾವಣೆಗಳ ಪರಿಣಾಮವನ್ನು ಅರಿತು, ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಅವರು ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕ ಪ್ರೊ. ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಾಗರಾಜ ವೈದ್ಯ ಎಂ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ ಬಿ., ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪೈ, ಉಪನ್ಯಾಸಕರಾದ ಉಜ್ವಲ ಶೆಟ್ಟಿ, ಸಾವಿತ್ರಿ, ಶಾಂತಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪೂಜಾ ಸ್ವಾಗತಿಸಿ, ಅಮೃತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಮಾ ವಂದನಾರ್ಪಣೆ ಮಾಡಿದರು.







