ವಾರಾಹಿ ನದಿ ಹಕ್ಕುಗಳಿಗಾಗಿ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆ: ರೈತರ ಬೇಡಿಕೆಗಳಿಗೆ ಬೆಂಬಲ

March 5, 2026 1:56 PM

ಉಡುಪಿ: ವಾರಾಹಿ ನದಿಯನ್ನು ಅವಲಂಬಿಸಿರುವ ರೈತರ ಹಕ್ಕುಗಳಿಗೆ ಆದ್ಯತೆ ನೀಡಬೇಕು ಹಾಗೂ ವಾರಾಹಿ ಮೂಲ ಯೋಜನೆಯಂತೆ ನೀರಿನ ಹಂಚಿಕೆಯನ್ನು ಖಚಿತಪಡಿಸಬೇಕು ಎಂಬ ಒತ್ತಾಯ ಸೇರಿದಂತೆ ಒಟ್ಟು ಏಳು ಬೇಡಿಕೆಗಳ ಈಡೇರಿಕೆಯನ್ನು ಆಗ್ರಹಿಸಿ ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ಎರಡು ದಿನಗಳ ಕಾಲ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆ ನಡೆಯಿತು.

ಕಳೆದ ನಾಲ್ಕು ದಶಕಗಳಿಂದ ಮುನ್ನಡೆಯದೆ ಇರುವ ವಾರಾಹಿ ನೀರಾವರಿ ಯೋಜನೆ, ವಾರಾಹಿ ಬಲದಂಡೆ ಯೋಜನೆ ಹಾಗೂ ಇತರ ನೀರಾವರಿ-ಕುಡಿಯುವ ನೀರಿನ ಯೋಜನೆಗಳನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ವಿರುದ್ಧ ಗೋಪಾಲ ಪೂಜಾರಿಯ ವಾಗ್ದಾಳಿ

ಸಿದ್ಧಾಪುರದಲ್ಲಿ ನಡೆದ ವಾರಾಹಿ ಉಳಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ,
“ಸಿದ್ಧಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 2023ರಲ್ಲಿ ನಾನು ಮುಖ್ಯಮಂತ್ರಿಗೆ ನೀಡಿದ ಪತ್ರವನ್ನು ತಪ್ಪಾಗಿ ಬಿಂಬಿಸಿ ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದೆ,” ಎಂದು ದೂರಿದರು.

“ಯೋಜನೆಗೆ ನಾನು ವಿರೋಧಿ ಎಂದು ಸಾಬೀತು ಮಾಡಬೇಕು, ಇಲ್ಲದಿದ್ದರೆ ಒಂದು ತಿಂಗಳೊಳಗೆ ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದೇನೆ. ಬಿಜೆಪಿ ಮೌನದಿಂದ ಅವರ ತಪ್ಪನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ,” ಎಂದು ಅವರು ವಾಗ್ದಾಳಿ ನಡೆಸಿದರು. ನಾನು ಶಾಸಕನಾಗಿದ್ದಾಗ ಜಾತಿ-ತಾರತಮ್ಯ ಮಾಡಿಲ್ಲ. ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದೇನೆ. ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಜಿ. ಶಂಕರ್ ಅವರ ಋಣ ನಮ್ಮ ಮೇಲಿದೆ,” ಎಂದು ಹೇಳಿದರು.

ಪತ್ರದಲ್ಲಿ ಉಲ್ಲೇಖಿಸಿದ ಅಂಶಗಳಿಗೆ ಪೂರಕವಾದ ತೀರ್ಮಾನಗಳು ಬಂದರೆ, ತಮ್ಮ ನಿಲುವು ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ಸ್ಪಷ್ಟಪಡಿಸಬೇಕೆಂದು ಅವರು ಪ್ರಶ್ನಿಸಿದರು. ಇತರೆ ನಾಯಕರ ಅಭಿಪ್ರಾಯ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಸಹ ಸಭೆಯಲ್ಲಿ ಮಾತನಾಡಿ ರೈತರ ನ್ಯಾಯಸಮ್ಮತ ಹಕ್ಕುಗಳಿಗೆ ಬೆಂಬಲ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಬೇಡಿಕೆಗಳ ಅಹವಾಲು ಸ್ವೀಕರಿಸಿದರು. ರೈತರ ಮತ್ತು ಸ್ಥಳೀಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಪಾದಯಾತ್ರೆಯಲ್ಲಿ ಅಶೋಕ್ ಪೂಜಾರಿ ಬೀಜಾಡಿ, ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಸೂರಜ್ ಜಿ. ಪೂಜಾರಿ, ಅರವಿಂದ ಪೂಜಾರಿ ಪಡುಕೋಣೆ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ವಂಡಬಳ್ಳಿ ಜಯರಾಮ್ ಶೆಟ್ಟಿ, ಅನಂತ ಮೊವಾಡಿ, ವಾಸುದೇವ ಪೈ ಸಿದ್ದಾಪುರ, ಹರೀಶ್ ತೋಳಾರ್ ಕೊಲ್ಲೂರು, ಭರತ್ ದೇವಾಡಿಗ, ಶೇಖರ ಪೂಜಾರಿ, ರಘುರಾಮ್ ಶೆಟ್ಟಿ ಬಿಜೂರು, ಗಣಪತಿ ಟಿ ಶ್ರೀಯಾನ್, ಸುಧೀಶ್ ಗುಲ್ವಾಡಿ, ಉದಯ ಪೂಜಾರಿ ಚಿತ್ತೂರು, ಹನೀಫ್ ಗುಲ್ವಾಡಿ, ಅಫ್ಝಲ್ ಹೈಕಾಡಿ, ಮುಸ್ತಾಕ್ ಕಂಡ್ಲೂರು, ಕಾನಿಷ್ಕ ಕೆ ಹೆಗ್ಡೆ ಬೈಲೂರು, ಅಕ್ಷಯ್ ಶೆಟ್ಟಿ, ಅನೀಶ್ ಪೂಜಾರಿ ಬೈಂದೂರು, ಪ್ರಶಾಂತ ಪೂಜಾರಿ ಕರ್ಕಿ, ಮೋಹನ್ ಪೂಜಾರಿ ಉಪ್ಪುಂದ ಹಾಗೂ ಹರಿಶ್ಚಂದ್ರ ಶೆಟ್ಟಿ ಸೇರಿ ಅನೇಕರು ಹಾಜರಿದ್ದರು.


Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page