ಕೋಟ: ಸಾಮಾಜಿಕ ಕಳಕಳಿ ಮತ್ತು ಜನಪರ ಕಾಳಜಿಗೆ ಸಾಕ್ಷಿಯೆಂಬಂತೆ, ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಸುಮಾರು 1 ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ 8 ಸುಸಜ್ಜಿತ ಮನೆಗಳನ್ನು ಫೆಬ್ರವರಿ 14ರಂದು ಚಿಟ್ಟಿಬೆಟ್ಟು ಕೊರಗ ಕಾಲನಿಯ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮನೆಗಳನ್ನು ಹಸ್ತಾಂತರಿಸಿ ಆಶೀರ್ವಚನ ನೀಡಿದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, “ಕೊರಗ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳ ಸೇವೆ ಮಾಡುವುದು ದೇವರ ಪೂಜೆಯಷ್ಟೇ ಪವಿತ್ರವಾದುದು. ಕೋಟತಟ್ಟು ಗ್ರಾ.ಪಂ. ಹಮ್ಮಿಕೊಂಡಿರುವ ಈ ಮಾದರಿ ಕಾರ್ಯಕ್ಕೆ ಶ್ರೀಮಠದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು,” ಎಂದು ಹರಸಿದರು.
ರಾಜ್ಯಕ್ಕೆ ಮಾದರಿಯಾದ ಯೋಜನೆ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, “ದಶಕಗಳ ಹಿಂದೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಕಾಲನಿಯಲ್ಲಿ ಸರ್ಕಾರ ನೀಡುವ 3.75 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಮನೆ ಕಟ್ಟಲು ಸಾಧ್ಯವಿರಲಿಲ್ಲ. ಇದನ್ನು ಮನಗಂಡು ಗ್ರಾಮ ಪಂಚಾಯತ್ ಮತ್ತು ದಾನಿಗಳು ಕೈಜೋಡಿಸಿ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮನೆಗಳನ್ನು ನಿರ್ಮಿಸಿದ್ದಾರೆ. ಈ ಅಭಿವೃದ್ಧಿ ಮಾದರಿ ಇಡೀ ರಾಜ್ಯಕ್ಕೆ ಪ್ರೇರಣೆಯಾಗಲಿದೆ,” ಎಂದರು.
ರಿಷಬ್ ಶೆಟ್ಟಿ ವಿಶೇಷ ಆಕರ್ಷಣೆ
ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಸಂಭ್ರಮಕ್ಕೆ ಮೆರುಗು ನೀಡಿದರು.
ಗಣ್ಯರ ಉಪಸ್ಥಿತಿ ಮತ್ತು ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ನಾಡೋಜ ಡಾ. ಜಿ. ಶಂಕರ್, ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಫಲಾನುಭವಿಗಳು: ಲಕ್ಷ್ಮೀ, ಶೃಂಗೇರಿ, ಗುಲಾಬಿ, ಸುಗಂಧಿ, ಸುಂದರಿ, ಸೋನಿ, ರವಿ ಹಾಗೂ ಮಹಾಬಲ ಅವರು ಹೊಸ ಮನೆಗಳ ಹಕ್ಕುಪತ್ರ ಮತ್ತು ಕೀಲಿಕೈ ಪಡೆದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ ಸ್ವಾಗತಿಸಿದರು, ಪಿಡಿಒ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸದಸ್ಯ ಪ್ರಮೋದ್ ಹಂದೆ ವಂದಿಸಿದರು.









