ವಂಡ್ಸೆ: ಮಾರಣಕಟ್ಟೆಯ ಎಂ.ಎಸ್. ಶ್ರೀಧರ ಮಂಜ ಮತ್ತು ಸಹೋದರರ ನೇತೃತ್ವದಲ್ಲಿ ಮಾರ್ಚ್ 19ರಂದು ನಡೆಯಲಿರುವ ಚತುಃಪವಿತ್ರ ನಾಗಮಂಡಲ ಸೇವೆಯ ಪೂರ್ವಭಾವಿ ಕಾರ್ಯಕ್ರಮವಾಗಿ, ಫೆಬ್ರವರಿ 15ರಂದು ಮಂಜರ ಮನೆಯ ‘ಅನುಗ್ರಹ’ ವಠಾರದಲ್ಲಿ ಚಪ್ಪರ ಮುಹೂರ್ತ ಹಾಗೂ ಗಣಹೋಮ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.

ಧಾರ್ಮಿಕ ವಿಧಿವಿಧಾನಗಳುಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸೇವಾಕರ್ತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, “ನಾಗಮಂಡಲದ ಯಶಸ್ವಿಗಾಗಿ ಇಂದು ಗಣಹೋಮ ಹಾಗೂ ಚಪ್ಪರ ಮುಹೂರ್ತವನ್ನು ನೆರವೇರಿಸಲಾಗಿದೆ. ಮಾರ್ಚ್ 4ರಂದು ಉಗ್ರಾಣ ಮುಹೂರ್ತ ನಡೆಯಲಿದ್ದು, ಮಾರ್ಚ್ 19ರಂದು ಪ್ರಧಾನ ನಾಗಮಂಡಲೋತ್ಸವ ಜರುಗಲಿದೆ,” ಎಂದು ತಿಳಿಸಿದರು.
ಮಾರ್ಚ್ 19ರ ಕಾರ್ಯಕ್ರಮದ ವಿವರ:
- ಬೆಳಿಗ್ಗೆ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು.
- ಮಧ್ಯಾಹ್ನ: ಸಾರ್ವಜನಿಕ ಅನ್ನಸಂತರ್ಪಣೆ.
- ಅಪರಾಹ್ನ: ಸಾಂಸ್ಕೃತಿಕ ಕಾರ್ಯಕ್ರಮಗಳು.
- ಸಂಜೆ 4:00ಕ್ಕೆ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಆಶೀರ್ವಚನ.
- ಸಂಜೆ 7:00ಕ್ಕೆ: ಹಾಲ್ಹಿಟ್ಟು ಸೇವೆ.
- ರಾತ್ರಿ 9:00ರಿಂದ: ಭವ್ಯ ಮಂಡಲ ಸೇವೆ.
.
ಈ ಮಹತ್ತರ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಊರಿನ ಸಮಸ್ತ ಭಕ್ತಾಭಿಮಾನಿಗಳು ಸಹಕರಿಸಬೇಕೆಂದು ಅವರು ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.

ಚಪ್ಪರ ಮುಹೂರ್ತದ ಸಂದರ್ಭದಲ್ಲಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ, ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಜಯರಾಮ ಶೆಟ್ಟಿ ವಂಡಬಳ್ಳಿ, ನ್ಯಾಯವಾದಿ ಕುಸುಮಾಕರ ಶೆಟ್ಟಿ ಕೆರೆಕೊಡ್ಲು, ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಹಾಗೂ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಶಿಕ್ಷಕರು ಮತ್ತು ಮಂಜ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಪುರೋಹಿತರಾದ ನೆಂಪು ನರಸಿಂಹ ಭಟ್ ಹಾಗೂ ಹರವರಿ ದಿನಕರ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ಸಂಪನ್ನಗೊಂಡವು









