ಕೋಟ: “ಪ್ರಾಮಾಣಿಕತೆ ಇನ್ನೂ ಸತ್ತಿಲ್ಲ” ಎಂಬುದನ್ನು ಬನ್ನಾಡಿಯ ಯುವಕ ಸಾಬೀತುಪಡಿಸಿದ್ದಾರೆ. ದಾರಿಯಲ್ಲಿ ಸಿಕ್ಕ ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಯನ್ನು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜನವರಿ 13, 2026 ರಂದು ಬ್ರಹ್ಮಾವರದ ನಿವಾಸಿ ಸುಮಾ ಅವರು ಸ್ಕೂಟರ್‌ನಲ್ಲಿ ಕೋಟಕ್ಕೆ ತೆರಳುತ್ತಿದ್ದಾಗ, ಮಾಬುಕಳ ಸೇತುವೆಯ ಬಳಿ ತಮ್ಮ ಎರಡು ಪವನ್ ತೂಕದ ಚಿನ್ನದ ಬಳೆಯನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದೇ ದಿನ ಬನ್ನಾಡಿಯ ನಿವಾಸಿ ಪ್ರವೀಣ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಕೆಳಗೆ ಬಿದ್ದಿತ್ತು. ಫೋನ್ ಎತ್ತಿಕೊಳ್ಳಲು ಹೋದಾಗ ಅವರಿಗೆ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ತುರ್ತು ಕೆಲಸದ ಮೇಲೆ ಬೆಂಗಳೂರಿಗೆ ಹೋಗಬೇಕಿದ್ದರಿಂದ, ಪ್ರವೀಣ್ ಅವರು ಬಳೆಯನ್ನು ತಮ್ಮ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು.
ಬಳಿಕ ಬೀಟ್ ಪೊಲೀಸ್ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಸಾರವಾದ ‘ಬಳೆ ಕಳೆದುಹೋದ ಮಾಹಿತಿ’ಯನ್ನು ಗಮನಿಸಿದ ಪ್ರವೀಣ್, ಬೆಂಗಳೂರಿನಿಂದ ಊರಿಗೆ ಮರಳಿದ ತಕ್ಷಣ ಕೋಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.
ಫೆಬ್ರವರಿ 10 ರಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರ ನೇತೃತ್ವದಲ್ಲಿ, ವಾರಸುದಾರರಾದ ಸುಮಾ ಅವರನ್ನು ಠಾಣೆಗೆ ಕರೆಸಲಾಯಿತು. ಪ್ರವೀಣ್ ಅವರು ತಮ್ಮ ಪ್ರಾಮಾಣಿಕತೆಯನ್ನು ಮೆರೆದು ಸುಮಾ ಅವರಿಗೆ ಚಿನ್ನದ ಬಳೆಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಠಾಣೆಯ ಅಧಿಕಾರಿಗಳಾದ ಮಾಂತೇಶ್ ಜಾಭಗೌಡ (ಎಸ್‌ಐ) ಗೋಪಾಲ ಪೂಜಾರಿ (ಎಎಸ್‌ಐ)ಮತ್ತು ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದು, ಪ್ರವೀಣ್ ಅವರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿದರು.









