
ಕುಂದಾಪುರ, ಜನವರಿ 31: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಬೆಳಗ್ಗೆ ವಂಡ್ಸೆ ಸಮೀಪದ ಹರವರಿಯಲ್ಲಿ ಸಂಭವಿಸಿದೆ.
ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ಯ ನಾವುಂದ ಅವರು ತಮ್ಮ ಕಾರ್ಯ ನಿಮ್ಮಿತ್ತ ಸಿಟ್ರಿಯಾನ್ ಕಾರಿನಲ್ಲಿ ವಂಡ್ಸೆ ಕಡೆ ತೆರಳುತ್ತಿದ್ದರು. ಈ ಸಂದರ್ಭ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಅವರು ಕಾರಿನಿಂದಹೊರ ಬರುತ್ತಿದ್ದಂತೆ ಬೆಂಕಿ ಆವರಿಸಿಕೊಂಡಿತು.

ಸ್ಥಳೀಯರು ಬೆಂಕಿ ನಂದಿಸಲು ಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಕೂಡಲೆ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದು ಅವರು ಬರುವಷ್ಟರಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಟ್ಟು ಕರಕಲಾಗುತ್ತಿದ್ದಂತೆ ಇಳಿಜಾರಿನಲ್ಲಿ ಕಾರು ಹಿಮ್ಮುಖವಾಗಿ ಸರಿದು ಬಂದು ಮಣ್ಣಿನ ರಾಶಿಯೊಂದರ ಸಮೀಪ ಬಂದು ನಿಂತಿತ್ತು. ನಂತರ ಅಗ್ನಿ ಶಾಮಕದ ಸಿಬ್ಬಂದಿಗಳು ಸಂಪೂರ್ಣ ಬೆಂಕಿ ಆರಿಸಿದ್ದರು.
2023ನೇ ಸಾಲಿನ ಕಾರು ಇದಾಗಿದ್ದು, ರೂ.8.60 ಲಕ್ಷ ವೆಚ್ಚದ್ದಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಕಾರಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ.








