ನ್ಯೂಸ್‌ಡೆಸ್ಕ್, ಜನವರಿ 28:
ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟ ಘಟನೆ ಸಂಭವಿಸಿದೆ.
ಬೆಳಿಗ್ಗೆ 8:45 ಗಂಟೆಯ ವೇಳೆಗೆ, ಮುಂಬೈನಿಂದ ಬಾರಾಮತಿಗೆ ಬರುತ್ತಿದ್ದ ಚಾರ್ಟರ್ಡ್ ಲಿಯರ್‌ಜೆಟ್ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ಪತನಗೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವಿಮಾನವು ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣವೇ ಭೀಕರ ಸ್ಫೋಟ ಸಂಭವಿಸಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಮೂಲಗಳ ಪ್ರಕಾರ ವಿಮಾನವು ಎರಡು ಬಾರಿ ಲ್ಯಾಂಡಿಗ್‌ಗೆ ಪ್ರಯತ್ನ ಮಾಡಿದೆ ಎನ್ನಲಾಗಿದ್ದು, ಮೊದಲನೇ ಯತ್ನ ವಿಫಲವಾದ ಹಿನ್ನೆಲೆ ಎರಡನೇ ಬಾರಿ ಲ್ಯಾಂಡಿಂಗ್ಗೆ ಪ್ರಯತ್ನ ಮಾಡಿತ್ತು. ಆದರೆ ವಿಮಾನವನ್ನು ಎರಡನೇ ಬಾರಿ ಲ್ಯಾಂಡಿಗ್ ವೇಳೆ ವಿಮಾನವು ರನ್‌ವೇಗೆ ಅಪ್ಪಳಿಸಿದೆ ಎನ್ನಲಾಗಿದೆ.
ಈ ದುರಂತದಲ್ಲಿ ಅಜಿತ್ ಪವಾರ್ ಸೇರಿ ಒಟ್ಟು ಆರು ಮಂದಿ ಮೃತಪಟ್ಟಿರುವುದಾಗಿ ಡಿಜಿಸಿಎ ಮೂಲಗಳು ದೃಢಪಡಿಸಿವೆ. ಸಾವನ್ನಪ್ಪಿದವರಲ್ಲಿ ಪೈಲಟ್‌ಗಳು, ಸಿಬ್ಬಂದಿ ಹಾಗೂ ಪವಾರ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅಧಿಕಾರಿಗಳು ಸೇರಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎನ್‌ಡಿಆರ್‌ಎಫ್ ತಂಡಗಳು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಯಾರೂ ಬದುಕುಳಿದಿರಲ್ಲಿಲ್ಲ. ವಿಮಾನದ ಅವಶೇಷಗಳು ನೂರಾರು ಮೀಟರ್ ದೂರಕ್ಕೆ ಚದುರಿರುವುದು ದುರಂತದ ತೀವ್ರತೆ ಯನ್ನು ತಿಳಿಸುತ್ತದೆ. ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ತುಂಬಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅಜಿತ್ ಪವಾರ್ ಅವರು ಇಂದು ಬಾರಾಮತಿಯಲ್ಲಿ ನಡೆಯಬೇಕಿದ್ದ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರಕ್ಕಾಗಿ ಬಂದಿರುವಾಗ ಈ ದುರಂತ ಸಂಭವಿಸಿದೆ. ಅವರ ಆಕಸ್ಮಿಕ ನಿಧನದಿಂದ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಆಘಾತ ವ್ಯಕ್ತವಾಗಿದ್ದು, ರಾಜ್ಯದ ಎಲ್ಲ ನಾಯಕರು ಸಂತಾಪ ಸೂಚಿಸಿದ್ದಾರೆ.
ಡಿಜಿಸಿಎ ಈ ದುರಂತದ ಕುರಿತು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದು, ತಾಂತ್ರಿಕ ದೋಷ, ಹವಾಮಾನ ಅಡಚಣೆ ಅಥವಾ ಇತರ ಕಾರಣಗಳು ಇದಕ್ಕೆ ಕಾರಣವಾಗಿರಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.











