ನ್ಯೂಸ್‌ಡೆಸ್ಕ್: ಚಿನ್ನದ ದರದಲ್ಲಿ ಏರಿಳಿತ ಎನ್ನುವದು ಸಣ್ಣ ಮತ್ತು ಕುಟುಂಬ ಆಧಾರಿತ ಚಿನ್ನದ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಈಡುಮಾಡಿದೆ.
ದೊಡ್ಡ ಜ್ಯುವೇಲರಿ ಕಂಪೆನಿಯ ಜಾಲಗಳು ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ಇದರಿಂದ ಸಣ್ಣ ಮತ್ತು ಕುಟುಂಬ ಆಧಾರಿತ ವ್ಯಾಪಾರಿಗಳಿಗೆ ಸಾಕಷ್ಟು ತೊಡಕಾಗಿದೆ.
ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ನ ಅಂದಾಜಿನ ಪ್ರಕಾರ, ದೇಶದ ಸ್ಥಳೀಯ ಜ್ಯುವೆಲ್ಲರ್‌ಗಳು ಮತ್ತು ಚಿನ್ನದ ಕರಕುಶಲಕಾರರು ಸುಮಾರು ಶೇ 45ರಷ್ಟು ಪ್ರಮಾಣದ ವ್ಯವಹಾರ ಕುಸಿತ ಎದುರಿಸುತ್ತಿದ್ದಾರೆ. ಚಿನ್ನದ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಮಧ್ಯಮ ವರ್ಗದ ಜನರಿಗೆ ಈಗ ಚಿನ್ನ ಖರೀದಿಸುವುದು ಸಾಧ್ಯವಾಗುತ್ತಿಲ್ಲ. ಮನೆ ಖರ್ಚುಗಳೇ ದೊಡ್ಡ ಸವಾಲಾಗಿವೆ. ದೀಪಾವಳಿ ಬಳಿಕ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ. ಅಂಗಡಿಗೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರೇ ಬರುತ್ತಿಲ್ಲ ಎನ್ನುವುದು ಕಳವಳಕಾರಿ ಸಂಗತಿ ಎನ್ನುತ್ತಿದ್ದಾರೆ ಖಾಸಗಿ ಜ್ಯುವೆಲ್ಲರ್‌ಗಳು.
ಚಿನ್ನ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದರೂ, ದರದಲ್ಲಿನ ಅಸ್ಥಿರತೆಯಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ಬೆಲೆ ಏರಿ ನಂತರ ಸ್ಥಿರವಾದರೆ ಜನ ಖರೀದಿಗೆ ಮನಸ್ಸು ಮಾಡುತ್ತಾರೆ. ಆದರೆ ದಿನದಿಂದ ದಿನಕ್ಕೆ ಬೆಲೆ ಏರುಪೇರು ಕಂಡರೆ, ಮದುವೆ ಅಥವಾ ತುರ್ತು ಸಂದರ್ಭ ಹೊರತುಪಡಿಸಿ ಯಾರೂ ಚಿನ್ನ ಖರೀದಿಸುವುದಿಲ್ಲ. ಇದರಿಂದಾಗಿ ಹಲವರು ಹೊಸ ಡಿಸೈನ್‌ಗಳ ಆಭರಣ ಸಂಗ್ರಹವನ್ನು ಸಹ ಮುಂದೂಡಿದ್ದಾರೆ.
3.5 ಲಕ್ಷ ಸಣ್ಣ ಆಭರಣ ಅಂಗಡಿ
ಭಾರತದಲ್ಲಿ ಸುಮಾರು 3 ಲಕ್ಷದಿಂದ 3.5 ಲಕ್ಷದವರೆಗೆ ಸಣ್ಣ ಮತ್ತು ಮಧ್ಯಮ ಮಟ್ಟದ ಸ್ವತಂತ್ರ ಆಭರಣ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ವ್ಯಾಪಾರದಲ್ಲಿ ಮದುವೆ ಆಭರಣಗಳು ಸುಮಾರು ಶೇ 60-65ರಷ್ಟು ಪಾಲು ಹೊಂದಿವೆ. ಗ್ರಾಹಕರೊಂದಿಗೆ ನಿರಂತರ ಸಂಪರ್ಕ, ಕಸ್ಟಮೈಸ್ ವಿನ್ಯಾಸಗಳೇ ಇವುಗಳ ಬಲವಾಗಿದ್ದರೂ, ಇತ್ತೀಚಿನ ಪರಿಸ್ಥಿತಿಗಳು ಈ ಆಧಾರವನ್ನೇ ತಲೆಕೆಳಗಾಗಿಸಿವೆ.











