ದಂಡುಪಾಳ್ಯ ಗ್ಯಾಂಗ್‌ನ ನಟೋರಿಯಸ್‌ ಕೊಲೆಗಾರ ಅರೆಸ್ಟ್‌

January 23, 2026 6:20 AM

ಮಂಗಳೂರು: ಇಲ್ಲಿನ ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನೋರ್ವನನ್ನು ಪೊಲೀಸರು 29 ವರ್ಷಗಳ ಬಳಿಕ ಬಂಧಿಸಿದ್ದಾರೆ.

1997ರಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ 55 ವರ್ಷ ಪ್ರಾಯದ ಚಿಕ್ಕ ಹನುಮಾ ಯಾನೆ ಚಿಕ್ಕ ಹನುಮಂತಪ್ಪ ಯಾನೆ ಕೆ. ಕೃಷ್ಣಪ್ಪನನ್ನು ಉರ್ವ ಠಾಣೆ ಪೊಲೀಸರು ಆಂದ್ರದ ಮದನಪಳ್ಳೆಯಲ್ಲಿ ಬಂಧಿಸಿದ್ದಾರೆ.

ಎ ೬ ಆರೋಪಿಯಾಗಿರುವ ಹನುಮ ಹೆಸರು ಬದಲಿಸಿಕೊಂಡು ಆಂದ್ರದಲ್ಲಿ ತಲೆಮರೆಸಿಕೊಂಡಿದ್ದ, ಇವನ ವಿರುದ್ಧ ಮಂಗಳೂರು ಜೆಎಂಎಫ್‌ಸಿ ಕೋರ್ಟ್‌ 2010ರಲ್ಲಿ ಎಲ್‌ಪಿಸಿ ವಾರೆಂಟ್‌ ಕೂಡ ಜಾರಿಗೊಳಿಸಿತ್ತು.

ಪ್ರಕರಣದ ಹಿನ್ನೆಲೆ: 1997ರ ಅಕ್ಟೋಬರ್ 11ರಂದು ಮಧ್ಯರಾತ್ರಿ ಮಂಗಳೂರು ಉರ್ವಾ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್ ಸದಸ್ಯರು, ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ (80) ಹಾಗೂ ರಂಜಿತ್ ವೇಗಸ್ (19)ರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ಇತರೆ ಐದು ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿತ್ತು.

ಆರೋಪಿ ಚಿಕ್ಕ ಹನುಮ ತನ್ನ ಗುರುತನ್ನು ಮರೆಮಾಚಿ ವಿಚಾರಣೆಗೆ ಹಾಜರಾಗದೆ ಪರಾರಿಯಾಗಿದ್ದ. ಈತನ ಮೇಲೆ ಕರ್ನಾಟಕ ರಾಜ್ಯದಲ್ಲಿ ಸುಮಾರು 13 ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಪತ್ತೆ ಕಾರ್ಯಾಚರಣೆಯಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್. ಮಂಜುಳಾ, ಎಎಸ್ಐ ವಿನಯ ಕುಮಾರ್ ಹಾಗೂ ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆನಂದ, ಹರೀಶ್ ಅವರು ಭಾಗವಹಿಸಿದರು. ಬಂಧನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತರು, ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಹುಮಾನ ನೀಡುವಂತೆ ರಾಜ್ಯ ಡಿಜಿ & ಐಜಿಪಿ ಅವರಿಗೆ ಶಿಫಾರಸು ಮಾಡಿದ್ದಾರೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page