ಮನೆ ತೆರವಿಗೆ ಅಡ್ಡಿಯಾದ ಜೆಸಿಬಿ ಅಲಭ್ಯತೆ
ಮಂದಾರ್ತಿ: ಇಲ್ಕಿನ ಹೆಗ್ಗುಂಜೆ ಗ್ರಾಮ ಪಂಚಾಯತ್ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಮನೆಗಳ ತೆರವಿಗೆ ಆಗಮಿಸಿದ ಬ್ರಹ್ಮಾವರ ತಹಶಿಲ್ದಾರರ ಶ್ರೀಕಾಂತ್ ಹೆಗ್ಡೆಯವರಿಗೆ ಜೆಸಿಬಿ ಸಿಗದೇ ಸಾಕಷ್ಟು ತೊಂದರೆ ಅನುಭವಿಸಿದರು.
ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಆಗಮಿಸಿದ್ದ ತಹಶೀಲ್ದಾರ್ರವರು ಜೆಸಿಬಿಯೊಂದನ್ನು ಗೊತ್ತು ಮಾಡಿದ್ದರು. ಆದರೆ ಸ್ಥಳೀಯರ ಆಕ್ರೋಶಕ್ಕೆ ಜೆಸಿಬಿ ಡ್ರೈವರ್ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದ. ಆ ಸ್ಥಳದಲ್ಲೇ ಬೇರೆ ಕೆಲಸಕ್ಕೆಂದು ಬಂದ ಜೆಸಿಬಿಯಲ್ಲಿ ಮನೆ ತೆರವುಗೊಳಿಸಲು ಕೋರಿದರು ಜೆಸಿಬಿಯವರು ತೆರವಿಗೆ ಒಪ್ಪಿಗೆ ಕೊಡಲಿಲ್ಲ. ಬಹಳ ಕಡೆ ಪ್ರಯತ್ನ ಮಾಡಿದರೂ ಯಾವುದೇ ಜೆಸಿಬಿ ದೊರಕದ ಹಿನ್ನೆಲೆ ತಹಶಿಲ್ದಾರ್ ಮತ್ತು ಅಧಿಕಾರಿಗಳು ವಾಪಾಸು ತೆರಳಿದರು.
ಸರಕಾರಿ ಸ್ಥಳ ಸರ್ವೆ ನಂಬರ್ 162-1 ಮತ್ತು 171-1ರಲ್ಲಿ ಅಕ್ರಮವಾಗಿ ಹಲವರು ಶೇಡ್ ಹಾಗೂ ಮನೆ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಲೋಕಾಯುಕ್ತ ಕೋರ್ಟ್‌ನಲ್ಲಿ ಮನೆಗಳನ್ನು ತೆರವುಗೊಳಿಸುವಂತೆ ಆದೇಶವಾಗಿತ್ತು. ಈ ಹಿನ್ನೆಲೆ ಮನೆಯನ್ನು ತೆರವುಗೊಳಿಸುವುದಕ್ಕೆ ನೋಟಿಸು ಜಾರಿಗೊಳಿಸಲಾಗಿತ್ತು.
ಈ ಕಡೆ ನೋಟಿಸು ಜಾರಿಯಾಗಿದ್ದರೂ, ಬೆಳ್ಳೆ ನಾಯ್ಕ್ ಎಂಬುವವರು ಅರೆಬರೆಯಾಗಿ ನಿರ್ಮಾಣವಾಗಿದ್ದ ಮನೆಯನ್ನು ತಮ್ಮ ಹತ್ತಿರದ ಸಂಬಂಧಿಕರಿಗೆ ಎರಡು ಲಕ್ಷಕ್ಕೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಆದರೆ ಸರಕಾರದಿಂದ ನೋಟಿಸು ಜಾರಿಯಾಗಿರುವ ವಿಚಾರ ಜಾಗ ತೆಗೆದುಕೊಂಡವರಿಗೆ ತಿಳಿದಿಲ್ಲ. ನೋಟಿಸು ಜಾರಿಯಾಗಿದ್ದು, ಜಾಗ ಪಡೆದವರಿಗೂ ಇವರೂ ತಿಳಿಸಿಲ್ಲ. ಮಾಂಗಲ್ಯ ಸರವನ್ನು ಅಡವಿಟ್ಟು ಸುಮಾರು 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಹಾಕಿ ಮನೆಗೆ ಮೇಲ್ಚಾವಣಿ ಹಾಕಿದ್ದಾರೆ.
ಕೋಟಿಗಟ್ಟಲೇ ಇದ್ದವರು ಅಕ್ರಮವಾಗಿ ದಾಖಲೆ ಸೃಷ್ಟಿಸಿ, ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಿಜವಾದ ಬಡವರು ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದರೆ ಅದು ಅಪರಾಧವಾಗುತ್ತದೆ. ಇವರು ಅಗತ್ಯವುಳ್ಳವರು. ಮನೆ ನಿರ್ಮಾಣದ ಕನಸು ಈಡೇರಿಸಲು ಹೊರಟಿದ್ದಾರೆ. ಸರಕಾರ ಇವರ ನೆರವಿಗೆ ನಿಲ್ಲಬೇಕು ಆದರೆ ಸರಕಾರ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತ ನ್ಯಾಯಾಲಯದಲ್ಲಿ ಆದೇಶವಾಗಿರುವುದರಿಂದ ತೆರವುಗೊಳಿಸುವುದು ಅನಿವಾರ್ಯವಾಗಿದೆ. ಸದ್ಯ ಎರಡು ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಎರಡು ದಿನಗಳ ನಂತರ ತೆರವು ಕಾರ್ಯ ಅನಿವಾರ್ಯ ಎಂದು ತಹಶೀಲ್ದಾರ್ ಸಾರ್ವಜನಿಕರಿಗೆ ತಿಳಿಸಿದರು.







