ಉಡುಪಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪೇಪರ್ ಲೀಕ್ ವಿಚಾರವಾಗಿ ಸಿ.ಜೆ.ಪಿ. ನಡೆಸುತ್ತಿರುವ ಪ್ರತಿಭಟನೆಯು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಹಾಗೂ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯೂ ಭರದಿಂದ ಸಾಗುತ್ತಿದೆ. ಹೀಗಿರುವಾಗ ಸಿ.ಜೆ.ಪಿ. ಪಕ್ಷವು ನೀಟ್ ವಿದ್ಯಾರ್ಥಿಗಳ ಹೆಸರನ್ನು ಬಳಸಿಕೊಂಡು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಪ್ರತಿಭಟನೆಯ ನೆಪದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ನೀಡುವುದು, ನಿಷೇಧಿತ ಸಂಘಟನೆಗಳ ಭಾಗವಹಿಸುವಿಕೆ, ಮಾರಕಾಸ್ತ್ರಗಳನ್ನು ಹಿಡಿದು ಹಿಂಸಾಚಾರ ನಡೆಸುವುದು ಹಾಗೂ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಈ ಎಲ್ಲಾ ದೇಶದ್ರೋಹಿ ಚಟುವಟಿಕೆಗಳ ಮೂಲ ಸೂತ್ರಧಾರ ಕಾಂಗ್ರೆಸ್ ಪಕ್ಷ ಎಂಬುದು ಜಗಜ್ಜಾಹೀರಾಗಿದೆ. ಇನ್ನಾದರೂ ಕಾಂಗ್ರೆಸ್ ಇಂತಹ ವ್ಯರ್ಥ ಹಾಗೂ ಸಮಾಜಘಾತಕ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.







