ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರ ನೇಮಕಾತಿಗೆ ತಡೆ: ಯಥಾ ಸ್ಥಿತಿಯಲ್ಲಿ ಕುಂದಾಪುರ, ಕೋಟ

March 5, 2026 10:32 PM

ಕುಂದಾಪುರ/ಕೋಟ: ಕುಂದಾಪುರ ವಿ.ಸ ವ್ಯಾಪ್ತಿಯ ಕುಂದಾಪುರ ಮತ್ತು ಕೋಟ ಬ್ಲಾಕ್‌ನ ಅಧ್ಯಕ್ಷ ಸ್ಥಾನದ ನೇಮಕಾತಿಯನ್ನು ರಾಜ್ಯ ಕಾಂಗ್ರೆಸ್‌ ಆದೇಶ ಹೊರಡಿಸಿದ 24 ಗಂಟೆಯೊಳಗೆ ತಡೆ ಹಿಡಿದಿದೆ.

ಬುಧವಾರ ಕುಂದಾಪುರ ಬ್ಲಾಕ್‌ಗೆ ವಿಕಾಸ್‌ ಹೆಗ್ಡೆ, ಕೋಟ ಬ್ಲಾಕ್‌ಗೆ ತಿಮ್ಮ ಪೂಜಾರಿಯವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ರಾಜ್ಯ ಕಾಂಗ್ರೆಸ್‌ ಆದೇಶಿಸಿತ್ತು. ಗುರುವಾರ ತನ್ನ ಆದೇಶಕ್ಕೆ ತಡೆ ನೀಡಿದೆ.

ತಡೆಗೆ ವ್ಯಕ್ತವಾಗಿದೆ ಆಕ್ರೋಶ

ದಶಕಗಳಿಂದ ಕುಂದಾಪುರ ಮತ್ತು ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಹರಿಪ್ರಸಾದ್‌ ಶೆಟ್ಟಿ ಮತ್ತು ಶಂಕರ್‌ ಕುಂದರ್‌ ಅವರು ಕಾರ್ಯನಿರ್ವಹಿಸುತ್ತಿದ್ದು, ಹರಿಪ್ರಸಾದ್‌ 3 ಬಾರಿ ಶಂಕರ್‌ ಕುಂದರ್‌ 6 ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಇವರ ಆಡಳಿತ ಅವಧಿಯಲ್ಲಿ ಪಕ್ಷ ಸಂಘಟನೆ ಸಮರ್ಪಕವಾಗಿ ನಡೆದಿಲ್ಲ. ಈ ಹಿನ್ನೆಲೆ ಪಕ್ಷಕ್ಕೆ ಬಲ ತುಂಬಲು ಹೊಸ ಅಧ್ಯಕ್ಷರು ಅವಶ್ಯಕವಾಗಿದೆ. ವಿಕಾಸ್‌ ಹೆಗ್ಡೆ ಯುವ ನೇತಾರನಾಗಿದ್ದು, ಕುಂದಾಪುರ ಭಾಗದಲ್ಲಿ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತಿಮ್ಮ ಪೂಜಾರಿಯವರು ಕೋಟ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸಮರ್ಥವಾಗಿ ನಿರ್ವಹಿಸಿದ್ದು, ಕೋಟ ಬ್ಲಾಕ್‌ ಅನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿದ್ದರೂ ಕರಾವಳಿಯಲ್ಲಿ ವಿರೋಧ ಪಕ್ಷದಂತೆ ಕಾಂಗ್ರೆಸ್‌ ಕಾರ್ಯಾಚರಿಸುತ್ತಿದೆ. ವರ್ಚಸ್ಸನ್ನು ಕಳೆದುಕೊಂಡಿರುವ ಪಕ್ಷಕ್ಕೆ ಹೊಸ ದಿಶೆಯನ್ನು ನೀಡಲು ಹೊಸ ಮುಖಗಳು ಕೆಲಸ ಮಾಡಬೇಕಿದೆ. ಆದರೆ ರಾಜ್ಯ ಕಾಂಗ್ರೆಸ್‌ ಯಾರದ್ದೋ ಒತ್ತಡಕ್ಕೆ ಮಣಿದು ಹಳೆ ಮುಖಗಳಿಗೆ ಮತ್ತೇ ಮಣೆ ಹಾಕಿದೆ. ಇದು ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಾಪ್ಚಂದ್ರ ಶೆಟ್ಟಿಯವರ ಕೆಂಗಣ್ಣಿಗೆ ಗುರಿಯಾದ್ರಾ ವಿಕಾಸ್‌?

ಬುಧವಾರ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಕಾಸ್‌ ಹೆಗ್ಡೆ ಪ್ರಮುಖ ಪಾತ್ರವಹಿಸಿದ್ದು, ಮತ್ತು ಗೋಪಾಲ ಪೂಜಾರಿಯವರ ಜೊತೆ ಗುರುತಿಸಿಕೊಂಡಿದ್ದು, ಪ್ರತಾಪ್‌ಚಂದ್ರ ಶೆಟ್ಟಿಯವರ ಕೆಂಗಣ್ಣಿಗೆ ಗುರಿಯಾಗಿದೆ ಎಂಬುದು ಹಲವರ ಅಂಬೋಣ. ಇದು ವಿಕಾಸ್‌ ಹೆಗ್ಡೆಯವರ ತಡೆಗೆ ಪ್ರಮುಖ ಕಾರಣವಾಗಿದೆ ಎನ್ನುವುದು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿರುವ ಗಾಸಿಪ್‌. ಮತ್ತೊಂದು ಸುದ್ಧಿಯ ಪ್ರಕಾರ ಪ್ರತಾಪ್‌ ಚಂದ್ರ ಶೆಟ್ಟಿಯವರ ಬೆಂಬಲಿಗರಾದ ಕೆದೂರು ಸದಾನಂದ ಶೆಟ್ಟಿಯರಿಗೆ ನೀಡಬೇಕೆಂಬ ಉದ್ದೇಶಕ್ಕೆ ತಡೆ ನೀಡಲಾಗಿದೆ ಎನ್ನುವ ಸುದ್ಧಿಯು ಹರಿದಾಡುತ್ತಿದೆ. ಈ ಕಾರಣಕ್ಕೆ ವಿಕಾಸ್‌ ಹೆಗ್ಡೆ ಆಯ್ಕೆಯನ್ನು ತಡೆ ಹಿಡಿಯಲಾಗಿದೆ ಎನ್ನಲಾಗಿದೆ.

ಇನ್ನು ತಿಮ್ಮ ಪೂಜಾರಿಯವರ ವಿಚಾರಕ್ಕೆ ಬರುವುದಾದರೆ ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಕುಂದಾಪುರದ ಜೊತೆಗೆ ಕೋಟದ ನೇಮಕಾತಿ ಆದೇಶವನ್ನು ತಡೆಯಲಾಗಿದೆ ಎನ್ನುವುದು ಒಂದು ಮೂಲದ ಮಾಹಿತಿಯಾದರೆ. ಇನ್ನೊಂದು ಕಡೆ ಪಕ್ಷಕ್ಕಾಗಿ ದುಡಿದ ಶಂಕರ್‌ ಕುಂದರ್‌ ಅವರಿಗೆ ಸೂಕ್ತ ಸ್ಥಾನಮಾನ ಸಿಗುವ ವರೆಗೆ ಅವರೇ ಮುಂದುವರಿಯಬೇಕು ಎನ್ನಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಂಕರ್‌ ಕುಂದರ್‌ ಕೋಟ ಬ್ಲಾಕ್‌ ಕಾಂಗ್ರೆಸ್‌ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬ್ಲಾಕ್‌ನಲ್ಲಿ ಪಕ್ಷದ ಆಡಳಿತ ಚುಕ್ಕಾಣಿ ಹಿಡಿಯಲು ಸಮರ್ಥರಿಲ್ಲದ ಸಂದರ್ಭ ಅಂದಿನ ಕಾಂಗ್ರೆಸ್‌ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಅವರ ಸೂಚನೆ ಮೇರೆಗೆ ಅಧ್ಯಕ್ಷಗಾದಿಯನ್ನು ಏರಿದ್ದು, 18 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಅಧ್ಯಕ್ಷಗಾದಿಯಿಂದ ಕೆಳಗಿಳಿಸುವ ಪ್ರಯತ್ನಗಳು ನಡೆದಿದ್ದರೂ ಶಂಕರ್‌ ಕುಂದರ್‌ ಅವರಿಗೆ ಸೂಕ್ತ ಸ್ಥಾನಮಾನ ಸಿಗುವವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎನ್ನುವ ಆಸ್ಕರ್‌ ಫೆರ್ನಾಂಡಿಸ್‌ ಅವರ ಅಲಿಖಿತ ನಿಯಮದ ಕಾರಣಕ್ಕೆ ಶಂಕರ್‌ ಕುಂದರ್‌ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದ್ದಿದ್ದಾರೆ. ಈ ಬಾರಿಯೂ ಇದೇ ಕಾರಣಕ್ಕೆ ತಡೆ ಹಿಡಿಯಲಾಗಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ. ಶಂಕರ್‌ ಕುಂದರ್‌ ಅವರು ಕೂಡ ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದ್ದಿದ್ದೇನೆ. ಕೈಯಿಂದ ಎಷ್ಟೋ ಲಕ್ಷ ಹಣವನ್ನು ಪಕ್ಷಕ್ಕಾಗಿ ಕಳೆದುಕೊಂಡಿದ್ದೇನೆ. ನನಗೆ ಸೂಕ್ತ ಸ್ಥಾನಮಾನ ಪಕ್ಷ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರಯತ್ನಗಳು ಕೂಡ ಜಾರಿಯಲ್ಲಿದೆ ಎನ್ನಲಾಗಿದೆ.

ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಕಾಂಗ್ರೆಸ್‌ ಪರಿಸ್ಥಿತಿ ಎನ್ನುವುದು ನಾ-ಕೊಡೆ ನೀ-ಬಿಡೆ ಎನ್ನುವಂತಾಗಿದೆ. ಮನೆಯೊಳಗಿನ ಜಗಳ ಬೀದಿಗೆ ಬಿದ್ದಂತಾಗಿದೆ. ರಾಜಕೀಯ ಮೇಲಾಟದಲ್ಲಿ ಹಿರಿಯರು ಮೇಲೆ ಬೀಳುತ್ತಾರೋ ಅಥವಾ ಕಿರಿಯರಿಗೆ ರಾಜ್ಯ ಕಾಂಗ್ರೆಸ್‌ ಮಣೆ ಹಾಕುತ್ತಾರೋ ಕಾದು ನೋಡಬೇಕಿದೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page