ಬ್ರಹ್ಮಾವರ: “ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ್ದ ಕಾನೂನುಗಳನ್ನು ನಾವು ದಶಕಗಳಿಂದ ಬಳಸುತ್ತಿದ್ದೆವು. ಆದರೆ ಕಳೆದ ಒಂದು ವರ್ಷದ ಹಿಂದೆ ನಮ್ಮ ವ್ಯವಸ್ಥೆಗೆ ಪೂರಕವಾಗಿ ಕಾನೂನುಗಳು ಬದಲಾಗಿವೆ. ಈ ಕಾನೂನಿನ ಅರಿವು ಕೇವಲ ವಕೀಲರಿಗೆ ಮಾತ್ರವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೂ ಇರಬೇಕು. ಜನರಲ್ಲಿ ಕಾನೂನಿನ ಜ್ಞಾನವಿದ್ದಾಗ ಮಾತ್ರ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ,” ಎಂದು ಮುಂಬಯಿಯ ನಿವೃತ್ತ ಎಸಿಪಿ ದಯಾನಂದ ನಾಯಕ್ ಅಭಿಪ್ರಾಯಪಟ್ಟರು. ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಕೋಟ ಗಿಳಿಯಾರಿನ ಜನಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 9ನೇ ವರ್ಷದ ‘ಅಭಿಮತ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಕೀರ್ತಿ ಕಲಶ’ ಮಹಾಗೌರವ ಸ್ವೀಕರಿಸಿ ಅವರು ಮಾತನಾಡಿ,
ಪ್ರಾಮಾಣಿಕ ಕರ್ತವ್ಯವೇ ನನ್ನ ಗುರಿ. ಮಾಧ್ಯಮಗಳು ತನ್ನನ್ನು ‘ಕ್ರೈಮ್ ಸ್ಪೆಷಲಿಸ್ಟ್’ ಎಂದು ಕರೆದಿವೆ, ಆದರೆ ನಾನು ಯಾವಾಗಲೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದ ದಯಾನಂದ ನಾಯಕ್ ಅವರು, ವಿದೇಶಗಳಲ್ಲಿ ಕಾನೂನಿನ ಅರಿವು ಹೆಚ್ಚಿರುವುದರಿಂದ ಅಲ್ಲಿ ಅಪರಾಧಗಳು ಕಡಿಮೆ ಇವೆ. ನಮ್ಮ ದೇಶದ ಶಿಕ್ಷಣ ಸಂಸ್ಥೆಗಳು ಮತ್ತು ಸಂಘ-ಸಂಸ್ಥೆಗಳು ಕಾನೂನು ಮಾಹಿತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಹಿರಿಯ ಸೂಲಗಿತ್ತಿ ಲಕ್ಷ್ಮೀ ಪೂಜಾರಿ ಗುಂಡಿಗೋಳಿ ಹಾಗೂ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದಕ್ಕೆ ‘ಯಶೋಗಾಥೆ’ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು



ಉದ್ಯಮಿ ಬರೋಡ ಶಶಿಧರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೀತಾನಂದ ಫೌಂಡೇಶನ್‌ನ ಪ್ರವರ್ತಕರು ಮಾತನಾಡಿ, ಅಶಕ್ತರಿಗೆ ನೆರವಾಗುವ ಜನಸೇವಾ ಟ್ರಸ್ಟ್‌ನ ಕಾರ್ಯವನ್ನು ಶ್ಲಾಘಿಸಿದರು

ಇದೇ ಸಂದರ್ಭದಲ್ಲಿ ಕೋಟದ ದೇವಕಿ ಪೂಜಾರಿ ಅವರಿಗೆ ನಿರ್ಮಿಸಿಕೊಟ್ಟ ಹೊಸ ಮನೆಯ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.
ಸಾಂಸ್ಕೃತಿಕ ವೈಭವ
ಸಭಾ ಕಾರ್ಯಕ್ರಮಕ್ಕೂ ಮುನ್ನ ನೃತ್ಯ ವಸಂತ ನಾಟ್ಯಾಲಯದವರಿಂದ ನೃತ್ಯೋಪಾಸನೆ ನಡೆಯಿತು. ತದನಂತರ ಖ್ಯಾತ ನಿರೂಪಕಿ ಅನುಶ್ರೀ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ, ಗಾಯಕ ವಿಜಯ್ ಪ್ರಕಾಶ್ ಅವರಿಂದ ‘ಸಿಂಗಾರ ಸಿರಿ’ ಸಂಗೀತ ರಸಮಂಜರಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಸಿಂಗಾರ ಸಿರಿಯಲ್ಲಿ ನಟ ರಿಷಬ್ ಶೆಟ್ಟಿಯವರನ್ನು ವಿಶೇಷವಾಗಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಭಾಷೆಗೆ ಭಾವನೆ ಮುಖ್ಯ. ಸಿನಿಮಾ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದು ಎಷ್ಟೋ ಕಲಾವಿದರಿಗೆ ಮತ್ತು ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದರು.

ವೇದಿಕೆಯಲ್ಲಿ ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸೂರ್ಯಕಾಂತ ಜಯಸುವರ್ಣ, ರಾಜೇಶ ಕಾರಂತ, ಉಪೇಂದ್ರ ಶೆಟ್ಟಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಘವೇಂದ್ರ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.









