ಮಲ್ಪೆ: ಇಲ್ಲಿನ ಕೋಡಿ ಬೆಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಪ್ರವಾಸಿ ದೋಣಿಯೊಂದು ಸಮುದ್ರ ಮಧ್ಯೆ ಮುಳುಗಡೆಯಾದ ಘಟನೆ ಸಂಭವಿಸಿದೆ.
ಈ ಘಟನೆಯಲ್ಲಿ ನಾಲ್ವರು ಅಸ್ವಸ್ಥ ಗೊಂಡಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮೈಸೂರು ಮೂಲದ ಶಂಕರಪ್ಪ (22), ಸಿಂಧು (23) ಮೃತಪಟ್ಟಿದ್ದು, ಇನ್ನುಳಿದ ಇಬ್ಬರಲ್ಲಿ ದಿಶಾ(26) ಸ್ಥಿತಿ ಚಿಂತಾಜನಕವಾಗಿದೆ. ಮತ್ತೋರ್ವನ ಧರ್ಮರಾಜ್ 26 ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಎಸ್ಪಿ ಹರೀರಾಂ ಶಂಕರ್, ರೆಸಾರ್ಟ್ ವೊಂದರಲ್ಲಿ ಉಳಿದಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇವರ ಪೈಕಿ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲ. ಸಮುದ್ರ ಮಧ್ಯೆ ದೋಣಿ ಅಕಸ್ಮಿಕವಾಗಿ ಮುಳುಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದಿದ್ದಾರೆ. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಓರ್ವ ಸ್ಥಿತಿ ಗಂಭೀರವಾಗಿದ್ದು, ಇನ್ನೋರ್ವ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದಿದ್ದಾರೆ.








