ಮೂಡುಬಿದಿರೆ: ವೀರ ರಾಣಿ ಅಬ್ಬಕ್ಕನ ೫೦೦ನೇ ವರ್ಷದ ಜನ್ಮ ಮಹೋತ್ಸವದ ಶುಭಾವಸರದಲ್ಲಿ, ಮೂಡುಬಿದಿರೆಯ ಮಣ್ಣಿನ ಮಗಳ ನೆನಪು ಮಾಡುವ ಮತ್ತೊಂದು ಮಹತ್ಕಾರ್ಯವನ್ನು ಜವನೆರ್ ಬೆದ್ರ ಫೌಂಡೇಷನ್ ಮಾಡಲಣಿಯಾಗಿದೆ. ಈಗಾಗಲೇ ಐದು ವರುಷಗಳ ಹಿಂದೆ, ಮೂಡುಬಿದಿರೆಯಲ್ಲಿರುವ ಚೌಟರ ಅರಮನೆಯ ಮುಂಭಾಗದಲ್ಲಿ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಕಿರು ಉದ್ಯಾನವನ ಹಾಗೂ ಕಿರು ಪ್ರತಿಮೆಯನ್ನು ಸ್ಥಾಪಿಸಿದ ಸಂಘಟನೆ, ಇದೀಗ ಅದೇ ಸ್ಥಳದಲ್ಲಿ ರಾಣಿ ಅಬ್ಬಕ್ಕ ದೇವಿಯ ಬೃಹತ್ ಆಳೆತ್ತರದ ಪ್ರತಿಮೆಯನ್ನು ರಚಿಸಿ, ಗೌರವ ಸೂಚಿಸಲು ಮುಂದಾಗಿದೆ.

ಯಾರು ಈ ಅಬ್ಬಕ್ಕ?: ರಾಣಿ ಅಬ್ಬಕ್ಕ ಚೌಟ ೧೬ ನೇ ಶತಮಾನದ ಉತ್ತರಾರ್ಧದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ಮೊದಲ ತುಳುವ ರಾಣಿ. ಕರಾವಳಿ ಕರ್ನಾಟಕದ (ತುಳುನಾಡು) ಕೆಲವು ಭಾಗಗಳನ್ನು ಆಳಿದ ಸ್ಥಳೀಯ ತುಳುವ ರಾಜವಂಶವಾದ ಚೌಟ ರಾಜವಂಶಕ್ಕೆ ಸೇರಿದವರಾಗಿದ್ದರು. ಅವರ ರಾಜಧಾನಿ ಪುತ್ತಿಗೆ. ಉಳ್ಳಾಲ ಬಂದರು ಪಟ್ಟಣವು ಅವರ ಅಂಗಸAಸ್ಥೆ ರಾಜಧಾನಿಯಾಗಿ ಕಾರ್ಯನಿರ್ವಹಿಸಿತು. ಪೋರ್ಚುಗೀಸರು ಉಳ್ಳಾಲವನ್ನು ವಶಪಡಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಿದರೂ, ಅಬ್ಬಕ್ಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅವರ ಪ್ರತಿಯೊಂದು ದಾಳಿಯನ್ನು ಹಿಮ್ಮೆಟ್ಟಿಸಿದರು. ಅವರ ಧೈರ್ಯಕ್ಕಾಗಿ, ಅವರು ಅಭಯ ರಾಣಿ (ನಿರ್ಭೀತ ರಾಣಿ) ಎಂದು ಕರೆಯಲ್ಪಟ್ಟರು. ಯುರೋಪಿಯನ್ ವಸಾಹತುಶಾಹಿಯ ವಿರುದ್ಧ ಹೋರಾಡಿದ ಆರಂಭಿಕ ಭಾರತೀಯರಲ್ಲಿ ಒಬ್ಬರು ಮತ್ತು ಭಾರತದ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ’ ಎಂದು ಪರಿಗಣಿಸಲಾಗುತ್ತದೆ.

ಎರಡನೇ ಪ್ರತಿಮೆ: ಮೂಡುಬಿದಿರೆಯಲ್ಲಿ ಸ್ವಚ್ಛತೆಯ ವಿಚಾರದಲ್ಲಿ ದೊಡ್ಡ ಆಂದೋಲನ ಮಾಡಿದ `ಜವನೆರ್ ಬೆದ್ರ ಸಂಘಟನೆ’ ತನ್ನ ನೂರನೇ ವಾರದ `ಕ್ಲೀನ್ ಅಪ್ ಮೂಡುಬಿದಿರೆಯ’ ಸವಿನೆನಪಿಗಾಗಿ ಚೌಟರ ಅರಮನೆಯ ಮುಂಭಾಗದಲ್ಲಿ ಕಿರು ಉದ್ಯಾನವನವನ್ನು ನಿರ್ಮಾಣ ಮಾಡಿತು. ಸುಮಾರು ಮೂರು ಅಡಿಗಳ ಪುಟ್ಟ ಅಬ್ಬಕ್ಕನ ಪ್ರತಿಮೆಯನ್ನು ಸ್ಥಾಪಿಸಿ, ಅಬ್ಬಕ್ಕ ಕಿರು ಉದ್ಯಾನವನವೆಂದು ನಾಮಕರಣ ಮಾಡಿತು. ತನ್ಮೂಲಕ ಇದು ಮೂಡುಬಿದಿರೆಯ ಎರಡನೇ ಅಬ್ಬಕ್ಕ ಮೂರ್ತಿ ಎಂಬ ದಾಖಲೆಯನ್ನು ಬರೆಯುವಂತಾಯಿತು. ರಾಣಿ ಅಬ್ಬಕ್ಕನ ೫೦೦ ನೇ ವರ್ಷದ ಜನ್ಮ ಮಹೋತ್ಸವದ ಸಂದರ್ಭದಲ್ಲಿ ಆರಡಿ ಎತ್ತರದ ಬೃಹತ್ ಪ್ರತಿಮೆಯನ್ನು ಇದೇ ಚೌಟರ ಅರಮನೆಯ ಮುಂಭಾಗದಲ್ಲಿ ಸ್ಥಾಪಿಸಿ, ಅದೊಂದು ಪ್ರವಾಸೀ ಆಕರ್ಷಣೆಯ ತಾಣವಾಗಬೇಕೆಂಬ ಮುತುವರ್ಜಿಯನ್ನು ಜವನೆರ್ ಬೆದ್ರ ಸಂಘಟನೆ ಹೊಂದಿದೆ. ಬೆಂಗಳೂರಿನಲ್ಲಿರುವ ಚೌಟರ ರಾಣಿ ಅಬ್ಬಕ್ಕನ ಪುತ್ಥಳಿಯನ್ನೇ ಹೋಲುವ ನಿಂತ ಭಂಗಿಯಲ್ಲಿರುವ ಅಬ್ಬಕ್ಕ ಪ್ರತಿಮೆಯನ್ನು ಸ್ಥಾಪಿಸುವ ಉದ್ದೇಶದಿಂದ ಇದೀಗ ಕಾರ್ಯಾರಂಭಿಸಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ವೇಣುಗೋಪಾಲ್ ಎಂಬ ಶಿಲ್ಪಿ ಮುತುವರ್ಜಿಯಿಂದ ಈ ಶಿಲ್ಪ ತಯಾರಿಯಲ್ಲಿ ನಿರತರಾಗಿದ್ದಾರೆ. ನವರಾತ್ರಿಯ ಶುಭಾವಸರದಲ್ಲಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ.
ಅಬ್ಬಕ್ಕ ಅಭಿಯಾನ: ರಾಣಿ ಅಬ್ಬಕ್ಕ ಮೂಡುಬಿದಿರೆಯ ಮಣ್ಣಿನ ಮಗಳು ಎಂಬoಶ ಗೊತ್ತಾಗುತ್ತಿದ್ದಂತೆಯೇ ಜವನೆರ್ ಬೆದ್ರ ಸಂಘಟನೆ ಅಬ್ಬಕ್ಕ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿತ್ತು. ಅಬ್ಬಕ್ಕನಿಗೆ ಸೂಕ್ತ ನ್ಯಾಯ ಸಿಗಲೇ ಬೇಕು ಎಂಬ ನೆಲೆಯಲ್ಲಿ ಹಲವು ಕಾರ್ಯಗಳನ್ನು ಮಾಡಿವೆ. ಮೂಡುಬಿದಿರೆಯಲ್ಲಿ ಅಬ್ಬಕ್ಕನ ಪ್ರತಿಮೆ ನಿರ್ಮಾಣ ಆಗಬೇಕೆಂಬ ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದು ಇಂದಿಗೆ ಇತಿಹಾಸ. ಅಬ್ಬಕ್ಕ ನಮ್ಮ ಮಣ್ಣಿನ ಮಗಳು ಎಂಬ ಅಭಿಯಾನ ರೂಪಿಸಿ ಕಾರ್ಯಕ್ರಮ ಆಯೋಜಿಸತ್ತು.ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿಯೂ ಚೌಟರ ಅರಮನೆಯಲ್ಲಿ ಅಬ್ಬಕ್ಕನ ನೆನಪಿಸುವ ಕಾರ್ಯವನ್ನು ಮಾಡಿತ್ತು.
ಸಂಸ್ಕೃತಿ ಗ್ರಾಮದಲ್ಲಿ ಮೊದಲ ಪುತ್ಥಳಿ: ಕಡಲಕೆರೆ ನಿಸರ್ಗಧಾಮದ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ರಾಣಿ ಅಬ್ಬಕ್ಕ ದೇವಿಯ ಬೃಹತ್ ಪುತ್ಥಳಿಯನ್ನು ೨೦೧೯ರಲ್ಲಿ ಶಾಸಕ ಉಮಾನಾಥ ಎ ಕೋಟ್ಯಾನ್ ಮುತುವರ್ಜಿಯಲ್ಲಿ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿತ್ತು. ೨೦೧೮ರಲ್ಲಿ ಕಡಲಕೆರೆಯಲ್ಲಿ ನೆಡದ ಜೋಡುಕರೆ ಕಂಬಳದ ಸಂದರ್ಭದಲ್ಲಿ ವೇದಿಕೆಯಲ್ಲಿ ಅಬ್ಬಕ್ಕನ ಭಾವಚಿತ್ರ ಇರಿಸಿ, ಪುಷ್ಪಾರ್ಚನೆ ಗೈದು ಗೌರವ ಸೂಚಿಸಲಾಗಿತ್ತು. ಚೌಟರ ಅರಮನೆಯ ಕುಲದೀಪ್ ಎಂ ಅವರ ನಿರಂತರ ಸಹಕಾರ ಪ್ರೋತ್ಸಾಹದಲ್ಲಿ ಮೂಡುಬಿದಿರೆಯ ಭಾಗದಲ್ಲಿ ಅಬ್ಬಕ್ಕನ ನೆನಪು ಉಳಿಸುವ ಕಾರ್ಯ ನಡೆಯುತ್ತಿರುವುದು ಗಮನಾರ್ಹ.

ಅಂಚೆ ಚೀಟಿಯ ಗೌರವ: ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆ ರಾಣಿ ಅಬ್ಬಕ್ಕ ದೇವಿಯ ಸ್ಮರಣಾರ್ಥ ೨೦೨೩ರಲ್ಲಿ ಅಬ್ಬಕ್ಕ ದೇವಿಯ ಅಂಚೆ ಚೀಟಿಯನ್ನು ಹೊರತರುವ ಮಹತ್ಕಾರ್ಯವನ್ನು ಮಾಡಿದೆ. ಒಟ್ಟಿನಲ್ಲಿ ಮೂಡುಬಿದಿರೆಯಲ್ಲಿ ರಾಣಿ ಅಬ್ಬಕ್ಕನ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುವ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನಾರ್ಹ.







