ಕೋಟ: ಪಂಚವರ್ಣ ಮಹಿಳಾ ಮಂಡಲದಿಂದ ಆಯೋಜಿತ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾಸ್ತಾನದ ಲೀಲಾವತಿ ಗಂಗಾಧರ ಪೂಜಾರಿಗೆ ‘ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಸಮುದ್ಯತಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, “ದೇಶ ಇಂದು ಮಹಿಳೆಯರಿಂದ ಸುಭದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿರುವ ಮಹಿಳಾ ಮಣಿಗಳ ಕಾರ್ಯವೇ ಇದರ ಸಾಕ್ಷಿ. ದೇಶದಲ್ಲಿ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಬೇಕೆಂಬ ಆಶಯವೂ ಬೇಗ ನಿಜವಾಗಲಿ,” ಎಂದು ಹಾರೈಸಿದರು. ಸಾಧಕರನ್ನು ಗುರುತಿಸಿ ಗೌರವಿಸುವ ಪಂಚವರ್ಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದೂ ಹೇಳಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಲತಾ ಎಸ್. ಹೆಗ್ಡೆ ಮಾತನಾಡಿ, “ಮಹಿಳೆಯರು ಇಂದು ಸಾಮಾಜಿಕ, ಸಾಂಸ್ಕೃತಿಕ, ಆಡಳಿತಾತ್ಮಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲೀಲಾವತಿ ಯವರಂತಹ ಮಹಿಳಾ ಸಾಧಕಿಯರನ್ನು ಗೌರವಿಸುವುದು ಪ್ರತಿಯೊಬ್ಬ ಮಹಿಳೆಯ ಹೆಮ್ಮೆ,” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಸಭಾಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮವನ್ನು ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ. ಮಯ್ಯ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು.
ಸದಸ್ಯೆ ಜಯಂತಿ ಕೋಟ್ಯಾನ್ ಪ್ರಾರ್ಥಿಸಿದರು, ಸ್ನೇಹಕೂಟದ ವಿನಯ ಉಡುಪ ಸನ್ಮಾನಪತ್ರ ವಾಚಿಸಿದರು.
ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ, ಪ್ರದಾನ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.
ಕಾರ್ಯಕ್ರಮದ ಯಶಸ್ವಿಗೆ ದಿನೇಶ್ ಆಚಾರ್, ಪುಷ್ಪಾ ಹಂದಟ್ಟು ಹಾಗೂ ಸಮುದ್ಯತಾ ಗ್ರೂಪ್ಸ್ ಸಹಕಾರ ನೀಡಿದವು.










