ಅಚ್ಲಾಡಿಯಲ್ಲಿ ಚಿರತೆ ಸೆರೆ: ಗ್ರಾಮಸ್ಥರ ಆತಂಕಕ್ಕೆ ಕೊನೆ!

September 2, 2026 11:13 AM

ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಅಚ್ಲಾಡಿ ಪರಿಸರದಲ್ಲಿ ತೀವ್ರ ಭಯ ಹಾಗೂ ಆತಂಕವನ್ನು ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿರುವ ಘಟನೆ ಅಚ್ಲಾಡಿಯಲ್ಲಿ ನಡೆದಿದೆ. ಚಿರತೆ ಸೆರೆಯಿಂದಾಗಿ ಸ್ಥಳೀಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಸತತವಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವ ಭೀತಿ ಎದುರಾಗಿತ್ತು. ಇದರಿಂದ ಸಂಜೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರಲು ಹೆದರುವ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರ ಸತತ ಮನವಿ ಹಾಗೂ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಸಂಚಾರವಿರುವ ಪ್ರಮುಖ ಸ್ಥಳವನ್ನು ಗುರುತಿಸಿ ಬೋನು ಅಳವಡಿಸಿದ್ದರು.

ಮಂಗಳವಾರ ಮುಂಜಾನೆ ಚಿರತೆಯು ಬೋನಿಗೆ ಬಿದ್ದಿದ್ದು, ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಬೋನಿನಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸೆರೆಹಿಡಿಯಲಾದ ಚಿರತೆಗೆ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ, ಅದನ್ನು ಸುರಕ್ಷಿತವಾಗಿ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ಸೆರೆಯಿಂದಾಗಿ ಕಳೆದ ಕೆಲ ದಿನಗಳಿಂದ ಆತಂಕದಲ್ಲಿದ್ದ ಅಚ್ಲಾಡಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇದೀಗ ಸಮಾಧಾನಗೊಂಡಿದ್ದಾರೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page