ಕುಂದಾಪುರ: ಕ್ಷೇತ್ರದಾದ್ಯಂತ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಬ್ಯಾನರ್ ಸಮರ ತೀವ್ರಗೊಂಡಿದೆ. ಕಾಂಗ್ರೆಸ್ ಹರಿಬಿಟ್ಟಿದ್ದ ಆಪಾದನೆಗಳಿಗೆ ಪ್ರತ್ಯುತ್ತರವಾಗಿ ಹಾಕಲಾಗಿದ್ದ ಕೌಂಟರ್ ಬ್ಯಾನರ್‌ಗಳನ್ನು ನೋಡಿ ಕಂಗಾಲಾದ ಕಾಂಗ್ರೆಸ್, ಆಡಳಿತ ಯಂತ್ರವನ್ನು ಬಳಸಿಕೊಂಡು ಬ್ಯಾನರ್ ತೆರವುಗೊಳಿಸಿದೆ ಎಂದು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾ ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣ ಹಾಗೂ ದೇಣಿಗೆಯ ಕುರಿತಾಗಿ ಬ್ಲಾಕ್ ಕಾಂಗ್ರೆಸ್ ಕುಂದಾಪುರ ವತಿಯಿಂದ ಕ್ಷೇತ್ರಾದ್ಯಂತ ದುರುದ್ದೇಶಪೂರಿತ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಈ ಅಪಪ್ರಚಾರವನ್ನು ಖಂಡಿಸಿ, ‘ಕುಂದಾಪುರದ ರಾಮಭಕ್ತರು’ ಎಂಬ ಹೆಸರಿನಲ್ಲಿ ತಿರುಗೇಟು ನೀಡುವ ಬ್ಯಾನರ್‌ಗಳನ್ನು ಹಾಕಲಾಗಿತ್ತು.
ಕೌಂಟರ್ ಬ್ಯಾನರ್‌ನಲ್ಲೇನಿತ್ತು? ರಾಮಭಕ್ತರ ಹೆಸರಿನಲ್ಲಿ ಪ್ರಕಟಗೊಂಡಿದ್ದ ಈ ಕೌಂಟರ್ ಬ್ಯಾನರ್‌ನಲ್ಲಿ, ಅಯೋಧ್ಯೆಯ ರಾಮಮಂದಿರ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೇವಲ ೭ ದಿನಗಳಲ್ಲಿ ಬಂಧಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಭಿನಂದನೆ ಸಲ್ಲಿಸಲಾಗಿತ್ತು. ಜೊತೆಗೆ, ರಾಜ್ಯ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಗೃಹಲಕ್ಷ್ಮಿ, ಮುಡಾ (MUDA) ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಗಳ ಆರೋಪಿಗಳನ್ನು ಯಾವಾಗ ಬಂಧಿಸುತ್ತೀರಿ ಎಂದು ಪ್ರಶ್ನಿಸಲಾಗಿತ್ತು.
ಜಿಲ್ಲಾಡಳಿತ ಬಳಸಿ ಬ್ಯಾನರ್ ತೆರವು: ಈ ಕೌಂಟರ್ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಕುಂದಾಪುರ ಕಾಂಗ್ರೆಸ್, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ಪ್ರಭಾವ ಬಳಸಿ ಜಿಲ್ಲಾಡಳಿತದ ಮೂಲಕ ಬ್ಯಾನರ್‌ಗಳನ್ನು ತೆರವುಗೊಳಿಸಲು ಮುಂದಾಗಿದೆ. ಕೌಂಟರ್ ಬ್ಯಾನರ್‌ನ ಪ್ರಶ್ನೆಗಳನ್ನು ಎದುರಿಸಲಾಗದೆ ಕಾಂಗ್ರೆಸ್ ಮುಖಂಡರು ಪಲಾಯನ ಮಾಡಿದ್ದಾರೆ ಎಂದು ಪೃಥ್ವಿರಾಜ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ.
ರಾಮಮಂದಿರದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ನ ನಿಜಬಣ್ಣವನ್ನು ಕ್ಷೇತ್ರದ ಜನತೆ ಈಗಾಗಲೇ ಅರಿತಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಬ್ಯಾನರ್ ತೆರವುಗೊಳಿಸಿದರೂ ಸಾರ್ವಜನಿಕರ ಪ್ರಶ್ನೆಗಳಿಂದ ಕಾಂಗ್ರೆಸ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.





