ಮಲ್ಪೆ, ಮಾರ್ಚ್ 3:
ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದ ಮೀನುಗಾರನು ಸಾವನ್ನಪ್ಪಿದ ಘಟನೆ ಮಾರ್ಚ್ 1 ರಂದು ಮಧ್ಯಾಹ್ನ ಸಂಭವಿಸಿದೆ.
ಥದೈಸ್ ಎಂ (45) ಘಟನೆಯಲ್ಲಿ ಮೃಥಪಟ್ಟಿದ್ದು, ಮೃತ ಥದೈಸ್ ಅವರು ತಮಿಳುನಾಡಿನ ಜರೀನ ಬಿನೇಶ್ ಅವರ ಮಾಲಿಕತ್ವದ IND-TN-15-MO-8375 ನಂಬರ್ ಹೊಂದಿರುವ ಸೈಂಟ್ ಅಂಥೋನಿ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು.
ಮಾರ್ಚ್ 1 ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ, ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮುಗಿಸಿ ಮೇಲಕ್ಕೆ ಬರುತ್ತಿರುವ ವೇಳೆ ಅವರು ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದರೆಂದು ಮೂಲಗಳು ತಿಳಿಸಿವೆ. ಇದನ್ನು ಗಮನಿಸಿದ ಇತರ ಮೀನುಗಾರರು ತಕ್ಷಣ ನೀರಿಗೆ ಹಾರಿ ಹುಡುಕಾಟ ನಡೆಸಿದ್ದಾರೆ, 20 ನಿಮಿಷಗಳ ಹುಡುಕಾಟದ ನಂತರ ಅಸ್ವಸ್ಥ ಸ್ಥಿತಿಯಲ್ಲಿ ಅವರನ್ನು ಮೇಲಕ್ಕೆ ತರಲಾಯಿತು.
ತಕ್ಷಣವೇ ಅವರನ್ನು ಅಂಬ್ಯುಲೆನ್ಸ್ ಮೂಲಕ ಸಂಜೆ 3.10 ಕ್ಕೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ವೈದ್ಯರು ಪರೀಕ್ಷಿಸಿದಾಗ ಥದೈಸ್ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 16/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.










