ಉಡುಪಿ: ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿ ಸರಣಿ ಅಪಘಾತ ನಡೆಸಿದ ಇಬ್ಬರು ಯುವಕರು ಈಗ ಪಡುಬಿದ್ರಿ ಪೊಲೀಸರ ಅತಿಥಿಯಾಗಿದ್ದಾರೆ.

ಕೇರಳ ಮೂಲದ ಧೀರಜ್ ಮತ್ತು ಗೌತಮ್ ತಿರುಗಾಟಕ್ಕೆಂದು ಉಡುಪಿಗೆ ಬಂದಿದ್ದು, ಉಡುಪಿ ಎಲ್ಲಾ ಸುತ್ತಾಡಿ ಕಂಠಪೂರ್ತಿ ಕುಡಿದು ಕೇರಳಕ್ಕೆ ವಾಪಾಸು ಹೊರಟಿದ್ದಾರೆ. ವಾಪಾಸು ಹೋಗುವಾಗ ರಾ.ಹೆ.66ರ ಪಾಂಗಾಳದಲ್ಲಿ ಕಾರೊಂದಕ್ಕೆ ಢಿಕ್ಕಿಹೊಡೆದು ನಿಲ್ಲಿಸದೇ ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಜಮಾಡಿ ಟೋಲ್‌ನಲ್ಲಿ ಈ ಕಾರನ್ನು ತಡೆಯಲು ಪಡುಬಿದ್ರಿ ಪೊಲೀಸರು ಕಾದು ಕುಳಿತಿದ್ದರು. ಪೊಲೀಸರನ್ನು ಕಂಡಕೂಡಲೇ ಕಾರನ್ನು ತಿರುಗಿಸಿದ ಹುಡುಗರು ರಾ.ಹೆದ್ದಾರಿಯ ಹಳೆ ರಸ್ತೆ ಕಡೆ ಕಾರನ್ನು ತಿರುಗಿಸಿದ್ದಾರೆ. ತಿರುಗಿಸುವ ಭರದಲ್ಲಿ ಅಲ್ಲೇ ಇದ್ದ ಅಲ್ಲೇ ಇದ್ದ ಜಾಹೀರಾತು ಫಲಕದ ಕಂಬಕ್ಕೆ ಢಿಕ್ಕಿ ಹೊಡೆದಿದ್ದಾರೆ.

ಕೂಡಲೇ ಪಡುಬಿದ್ರಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿದ್ದು, ಮತ್ತು ಅಪಘಾತ ನಡೆಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.