• August 22, 2025
  • Last Update August 21, 2025 9:01 pm
  • Australia

ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು‌ ಅರ್ಜಿ ತಿರಸ್ಕೃತ: ಬೆಂಬಲಿಗರಿಂದ ಕಣ್ಣೀರು

ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು‌ ಅರ್ಜಿ ತಿರಸ್ಕೃತ: ಬೆಂಬಲಿಗರಿಂದ ಕಣ್ಣೀರು

ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಜೀ ಕುರಿತು ಅವಹೇಳನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಹೇಶ್‌ಶೆಟ್ಟಿ ತಿಮರೋಡಿಯವರಿಗೆ ಬ್ರಹ್ಮಾವರದ ತಾಲೂಕು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಗುರುವಾರ ಬೆಳಗ್ಗೆ ಉಜಿರೆಯ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದ ಸಂದರ್ಭ, ತಮ್ಮ ಖಾಸಗಿ ವಾಹನದಲ್ಲಿ ಬರುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಪೊಲೀಸರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಖಾಸಗಿ ವಾಹನದಲ್ಲಿ ಬರುವುದಕ್ಕೆ ಅವಕಾಶ ನೀಡಿದರು. ಪೊಲೀಸ್ ಬಿಗುಬಂದೊಬಸ್ತಿನಲ್ಲಿ ಬ್ರಹ್ಮಾವರಕ್ಕೆ ಕರೆತರಲಾಯಿತು.

ಈ ಸಂದರ್ಭ ಬ್ರಹ್ಮಾವರ ಠಾಣೆಯ ಸುತ್ತಮುತ್ತ ಸಾಕಷ್ಟು ಜನ ಜಮಾಯಿಸಿದ್ದರು. ಧರ್ಮಸ್ಥಳ ಪರವಿದ್ದವರು ತಿಮರೋಡಿಗೆ ಧಿಕ್ಕಾರ ಕೂಗಿದರೆ, ತಿಮರೋಡಿ ಬೆಂಬಲಿಗರು ಜೈಕಾರ ಹಾಕಿದರು.

ಉಡುಪಿ ಸೆನ್ ಠಾಣಾ ಇನ್ಸ್ಪೆಕ್ಟರ್ ರಾಮಚಂದ್ರ ಅವರ‌ ನೇತೃತ್ವದಲ್ಲಿ ಸುಮಾರು ಮೂರು ಘಂಟೆಗಳ ವಿಚಾರಣೆ ನಡೆಯಿತು. ಬ್ರಹ್ಮಾವರದ ಠಾಣೆಯ ಸಮೀಪದಲ್ಲಿ ಸಾಕಷ್ಟು ಜನ ತಿಮರೋಡಿ ಬೆಂಬಲಿಗರು ಜಮಾಯಿಸಿದ್ದರಿಂದ ಬ್ರಹ್ಮಾವರ ಠಾಣೆಯ ೫೦೦ ಮೀ ವ್ಯಾಪ್ತಿಯಲ್ಲಿ ಸೆಕ್ಷನ್ 163 ಜಾರಿ ಗೊಳಿಸಲಾಗಿತ್ತು.

ಸುಮಾರು ನಾಲ್ಕು ಗಂಟೆ ಸುಮಾರಿಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಲು ಪೊಲೀಸರು ಕರೆತಂದರು. ಈ ವೇಳೆ ತಿಮರೋಡಿಯವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ರಕ್ತದೊತ್ತಡ ಏರಿಕೆಯಾಗಿದೆ. ಈ ಹಿನ್ನೆಲೆ ಅಲ್ಲಿ ಚಿಕಿತ್ಸೆ ನೀಡಿ ಕೆಲ ಸಮಯದ ಬಳಿಕ ನ್ಯಾಯಾಲಯಕ್ಕೆ ಕರೆತರಲಾಯಿತು. ಇಲ್ಲಿ ತಿಮರೋಡಿ ಪರ ವಕೀಲರು ಬೇಲ್ ನೀಡುವುದಕ್ಕೆ ನ್ಯಾಯಾದೀಶರಿಗೆ ಮನವಿ ಮಾಡಿದರು. ಆದರೆ ಬೇಲ್ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿ ನ್ಯಾಯಾಂಗ ಬಂಧನಕ್ಕೆ ನೀಡಿದರು.

ನ್ಯಾಯಾಂಗ ಬಂಧನದ ಸುದ್ಧಿ ಕೇಳುತ್ತಿದ್ದಂತೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಮಹೇಶಣ್ಣನೊಂದಿಗೆ ನಮ್ಮನ್ನು ಜೈಲಿಗೆ ಕಳುಹಿಸುವಂತೆ ಆಗ್ರಹಿಸಿದರು. ಕೆಲ ಕಾಲ ಕೋರ್ಟ್ ಆವರಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಮಹಿಳೆಯರು ಕಣ್ಣಿರಿಡುತ್ತಾ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಎಲ್ಲರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರು.

administrator

Related Articles

Leave a Reply

Your email address will not be published. Required fields are marked *

error: Content is protected !!