ಕಾಸರಗೋಡು: 18 ವರ್ಷಗಳ ಹಿಂದೆ ಮನೆ ಮಾಲೀಕನಿಂದ ಹತ್ಯೆಯಾಗಿದ್ದ ಸಫಿಯಾ ದೇಹಾವಶೇಷ ಕೊನೆಗೂ ಹೆತ್ತವರನ್ನು ಸೇರಿದೆ.
ಧಾರ್ಮಿಕ ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನಡೆಸಬೇಕೆಂದು ಪೋಷಕರು ಕೋರಿದ ಹಿನ್ನೆಲೆ ಕಾಸರಗೋಡು ನ್ಯಾಯಾಲಯ ಸಫಿಯಾ ದೇಹಾವಶೇಷಗಳನ್ನು ಪೋಷಕರಿಗೆ ಹಸ್ತಾಂತರಿಸಿದೆ.
ಗೋವಾದಲ್ಲಿ ಗುತ್ತಿಗೆದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಸರಗೋಡಿನ ಮುಳಿಯಾರ್ ನಿವಾಸಿ ಕೆಸಿ. ಹಂಝ್ ಅವರ ಮನೆಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಅಯ್ಯಂಗೇರಿ ನಿವಾಸಿ 13 ವರ್ಷ ವಯಸ್ಸಿನ ಸಫಿಯಾ ಕೆಲಸಕ್ಕಿದ್ದಳು.
ಮನೆಗೆಲಸ ಮಾಡುತ್ತಿದ್ದ ಸಫಿಯಾಳಿಗೆ ಕೆಲಸದ ನಡುವೆ ಬಿಸಿನೀರು ಬಿದ್ದು, ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿತ್ತು. ಈ ವಿಚಾರ ಹೊರಗೆ ಬಂದರೆ ಬಾಲಕಾರ್ಮಿಕಳನ್ನು ಕೆಲಸಕ್ಕೆ ಇಟ್ಟಿರುವುದರಿಂದ ತನಗೆ ಶಿಕ್ಷೆಯಾಗಬಹುದೆಂಬ ಆತಂಕದಿಂದ ಹಂಝಾ ಹಾಗೂ ಆತನ ಪತ್ನಿ ಮೈಮುನಾ ಸಫಿಯಾಳನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟಿನ ಬಳಿಕ ಹೂತಿಟ್ಟಿದ್ದರು.
2006ರ ಡಿಸೆಂಬರ್‌ನಲ್ಲಿ ಹಂಝಾ ಮತ್ತು ಆತನ ಪತ್ನಿ ಕಾಸರಗೋಡಿಗೆ ಬಂದಾಗ ಜೊತೆಯಲ್ಲಿ ಸಫಿಯಾ ಇರಲಿಲ್ಲ. ಈ ಬಗ್ಗೆ ಸಫಿಯಾ ಪೋಷಕರು ಹಂಝ ಬಳಿ ವಿಚಾರಿಸಿದಾಗ ಆಕೆ ಕಾಣೆಯಾಗಿದ್ದಾಳೆ ಎಂದು ಹಂಝ್ ಹೇಳಿದ್ದ, ಈ ಬಗ್ಗೆ ಆದೂರು ಠಾಣೆಯಲ್ಲಿ ಸಫಿಯಾ ಪೋಷಕರು ದೂರು ನೀಡಿದ್ದರು. ಈ ಸಂದರ್ಭ ಹಂಝ್ ಕೂಡ ಜತೆಯಲ್ಲಿದ್ದ.
ದಿನಗಳು ಕಳೆಯುತ್ತಿದ್ದರೂ ಪೊಲೀಸರು ತನಿಖೆಯನ್ನು ನಡೆಸದೇ ಸುಮ್ಮನಿದ್ದ ಹಿನ್ನೆಲೆ ಸಫಿಯಾ ಹೋರಾಟ ಸಮಿತಿ ಎಂಬ ಕ್ರಿಯಾ ಸಮಿತಿಯನ್ನು ರಚಿಸಿ 90 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಒತ್ತಡಕ್ಕೆ ಮಣಿದ ಸರಕಾರ 2008ರಲ್ಲಿ ಈ ಕೇಸನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿತ್ತು. ಕ್ರೈಂ ಬ್ರಾಂಚ್ ಮೊದಲಿನಿಂದ ತನಿಖೆ ಆರಂಭಿಸಿ ಹಂಝ್ ಮತ್ತು ಅವನ ಪತ್ನಿಯನ್ನು ವಿಚಾರಣೆ ನಡೆಸಿತ್ತು.
ವಿಚಾರಣೆ ವೇಳೆ ನಡೆದ ಅಮಾನವೀಯ ಕೃತ್ಯ ಹೊರಬಂದಿತ್ತು. ಅವರಿಬ್ಬರನ್ನು ಬಂಧಿಸಿ, ಹೂತಿಡಲಾಗಿದ್ದ ಸಫಿಯಾ ದೇಹದ ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಘಟನೆಯನ್ನು ವಿಚಾರಣೆ ಮಾಡಿದ ಜಿಲ್ಲಾ ಸೆಷನ್ಸ್ ಕೋರ್ಟ್ ಇವರ ಪೈಶಾಚಿಕ ಕೃತ್ಯಕ್ಕೆ 2015ರಲ್ಲಿ ಹಂಝ್‌ಗೆ ಮರಣದಂಡನೆಯನ್ನು ಇನ್ನುಳಿದವರಿಗೆ ಮೂರು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿತ್ತು. ಬಳಿಕ ಹೈಕೋರ್ಟ್ ಹಂಝ್‌ಗೆ ವಿಧಿಸಲಾದ ಮರಣದಂಡನೆಯನ್ನು ರದ್ದುಗೊಳಿಸಿ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.
ಆದರೆ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪುತ್ರಿಯ ಅಂತ್ಯಸಂಸ್ಕಾರ ಮಾಡಬೇಕೆಂದು ಕೋರಿ ಪೋಷಕರು ಕಳೆದ ತಿಂಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ಶುಕೂರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಾನು ಎಸ್. ಪಣಿಕ್ಕರ್ ಅವರು ಮೃತ ಸಫಿಯಾಳ ದೇಹದ ಭಾಗಗಳನ್ನು ಪೋಷಕರಿಗೆ ಒಪ್ಪಿಸುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ ಸಫಿಯಾ ಪೋಷಕರು ಪುತ್ರಿಯ ದೇಹಾವಶೇಷಗಳನ್ನು ಸ್ವೀಕರಿಸಿದರು. ಈ ಸಂದರ್ಭ ಸಫಿಯಾ ಹೆತ್ತವರು ಆಕ್ರಂದನ ಮುಗಿಲು ಮುಟ್ಟಿತ್ತು.