• August 23, 2025
  • Last Update August 21, 2025 9:01 pm
  • Australia

ಮಂಗಳೂರು: ಸಮಾಜ ಸೇವಕ ಬಾಬು ಪಿಲಾರ್‌ಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿ ಕೊನೆಕ್ಷಣಕ್ಕೆ ಇಲ್ಲ ಎಂದು ಕೈತೊಳೆದುಕೊಂಡ ಸರಕಾರ

ಮಂಗಳೂರು: ಸಮಾಜ ಸೇವಕ ಬಾಬು ಪಿಲಾರ್‌ಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿ ಕೊನೆಕ್ಷಣಕ್ಕೆ ಇಲ್ಲ ಎಂದು ಕೈತೊಳೆದುಕೊಂಡ ಸರಕಾರ

ಮಂಗಳೂರು: ಸಾವಿರಾರು ಅನಾಥ, ಬಡ, ನಿರ್ಗತಿಕರ ಮೃತದೇಹವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಂತ್ಯ ಸಂಸ್ಕಾರ ಮಾಡಿದ್ದ ಸಮಾಜ ಸೇವಕ ದ.ಕ.ಜಿಲ್ಲೆಯ ಉಳ್ಳಾಲ ತಾಲೂಕಿನ ಬಾಬು ಪಿಲಾ‌ರ್ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಅವರು ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಹೋದಾಗ ತಮಗೆ ಪ್ರಶಸ್ತಿಯಿಲ್ಲ ಕ್ಷಮಿಸಿ ಮುಂದಿನ ಸಲ ಪರಿಗಣಿಸುತ್ತೇವೆಂದು ಸರಕಾರ ಕೈತೊಳೆದುಕೊಂಡಿದೆ. ಈ ಪ್ರಶಸ್ತಿ ವಂಚನೆಗೆ ಆಯ್ಕೆ ಸಮಿತಿಯ ಎಡವಟ್ಟೇ ಕಾರಣ. ಇದು ಹಿರಿಯ ಸಮಾಜ ಸೇವಕನಿಗೆ ಮಾಡಿರುವ ಅವಮಾನ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರಿನ ಅಧಿಕಾರಿಯೊಬ್ಬರು ಗುರುವಾರ ಸಂಜೆ ಬಾಬು ಪಿಲಾರ್ ಅವರಿಗೆ ಕರೆ ಮಾಡಿ ಸುವರ್ಣ ಮಹೋತ್ಸವ ಪ್ರಶಸ್ತಿಗೆ ತಾವು ಆಯ್ಕೆಯಾಗಿದ್ದೀರಿ ಎಂದಿದ್ದರು. ಆಗ ಆಶ್ಚರ್ಯಗೊಂಡ ಅವರು ‘ತಮ್ಮ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ’ ಎಂದಿದ್ದರು. ಅದಕ್ಕೂ ಪ್ರತಿಕ್ರಿಯಿಸಿದ ಆ ಅಧಿಕಾರಿ ಆಯ್ಕೆ ಸಮಿತಿಯ ತಮ್ಮ ಹೆಸರನ್ನೇ ಸೂಚಿಸಿದೆ. ನೀವು ತಕ್ಷಣ ಬೆಂಗಳೂರಿಗೆ ಹೊರಟು ಬನ್ನಿ ಎಂದಿದ್ದರು. ಅದರಂತೆ ಬಾಬು ಪಿಲಾರ್ ಗುರುವಾರ ರಾತ್ರಿಯೇ ಬೆಂಗಳೂರಿಗೆ ಹೊರಟಿದ್ದರು. ಬೆಳಗ್ಗೆ ಬೆಂಗಳೂರು ತಲುಪಿದ್ದ ಅವರಿಗೆ ಕುಮಾರಕೃಪಾ ಸರಕಾರಿ ಅತಿಥಿಗೃಹದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಇಲಾಖೆಯಿಂದ ಪೋನ್ ಕರೆ ಮಾಡಿದ ಅಧಿಕಾರಿಯೊಬ್ಬರು, ಹೆಸರು ಅದಲು ಬದಲಾದ ಕಾರಣ ಎಡವಟ್ಟಾಗಿದೆ. ತಮ್ಮ ಹೆಸರು ಬಾಬು ಪಿಲಾರ್ ಆಗಿದ್ದು, ನಿಜವಾಗಿಯೂ ಬಾಬು ಕಿಲಾರ್ ಎಂಬವರಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಹಾಗಾಗಿ ನಮ್ಮನ್ನು ಕ್ಷಮಿಸಿ. ತಮ್ಮನ್ನು ಮುಂದಿನ ಬಾರಿ ಪರಿಗಣಿಸಲಾಗುವುದು ಎಂದಿದ್ದಾರೆ. ಇದು ಬಾಬು ಪಿಲಾರ್ ಅವರಿಗೆ ಅವಮಾನ ಮಾಡಿದಂತಾಗಿದೆ.

ಬಿಡುಗಡೆಯಾದ ಪಟ್ಟಿಯಲ್ಲಿ ಬಾಬು ಕಿಲಾರ್ ಎಂಬ ಹೆಸರಿತ್ತು. ಜಿಲ್ಲೆ ಯಾವುದು ಎಂದು ನಮೂದಿಸಿರಲಿಲ್ಲ. ಕ್ಷೇತ್ರ ‘ಸಂಕೀರ್ಣ’ಎಂದಿತ್ತು. ಸಮಾಜ ಸೇವಕ, ಹೋರಾಟಗಾರರಾಗಿರುವ ಬಾಬು ಪಿಲಾರ್ ಪ್ರಶಸ್ತಿಗಾಗಿ ಅರ್ಜಿ ಹಾಕಿರಲಿಲ್ಲ. ಗುರುವಾರ ಸಂಜೆ ಫೋನ್ ಕರೆ ಬಂದಾಗಲೂ ಹೆಸರು ಖಚಿತಪಡಿಸಿಕೊಳ್ಳಿ ಎಂದು ಅವರು ಹೇಳಿಕೊಂಡಿದ್ದರು. ಕರೆ ಮಾಡಿದ ಅಧಿಕಾರಿ ಖಚಿತಪಡಿಸಿದ ಬಳಿಕವೇ ನಿಮಗೆ ಕರೆ ಮಾಡುತ್ತಿರುವುದು ಎಂದ ಕಾರಣ ಬಾಬು ಪಿಲಾ‌ರ್ ಬೆಂಗಳೂರಿಗೆ ತೆರಳಿದ್ದರೂ ಇದೀಗ ಆಯ್ಕೆ ಸಮಿತಿಯ ಎಡವಟ್ಟಿನಿಂದ ವಾಪಸ್ ಬರುವಂತಾಗಿದೆ.

ನಿನ್ನೆ ದ.ಕ.ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜಿಲ್ಲಾ ಪ್ರಶಸ್ತಿ ಪಟ್ಟಿಯಲ್ಲಿ ಬಾಬು ಪಿಲಾ‌ರ್ ಹೆಸರಿತ್ತು. ಆದರೆ ರಾಜ್ಯ ಮಟ್ಟದ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಆ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ತೆರಳಿದ್ದರು. ಇದೀಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತಾಗಿದೆ. ಆಯ್ಕೆ ಸಮಿತಿಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಸಾಧಕರೊಬ್ಬರನ್ನು ಬೆಂಗಳೂರಿಗೆ ಕರೆಯಿಸಿ ಪ್ರಶಸ್ತಿ ನೀಡದೆ ಇರುವುದು ಸಮಾಜ ಸೇವಕರಿಗೆ ಅವಮಾನ ಮಾಡಿದಂತೆ ಎಂಬ ಆಕ್ರೋಶ ವ್ಯಕ್ತವಾಗಿದೆ.

administrator

Related Articles

Leave a Reply

Your email address will not be published. Required fields are marked *

error: Content is protected !!