ಹೆಬ್ರಿ: ಇಲ್ಲಿಗೆ ಸಮೀಪದ ಕಬ್ಬನಾಲೆ ಪೀತೇಬೈಲಿನಲ್ಲಿ ಎನ್ಕೌಂಟರ್ ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.

ಹಲವು ವರ್ಷಗಳಿಂದ ನಿಂತಿದ್ದ ನಕ್ಸಲ್ ಚಟುವಟಿಕೆ ಮತ್ತೇ ಗರಿಗೆದರಿದ ಹಿನ್ನೆಲೆ ಕುಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಸೋಮವಾರ ರಾತ್ರಿ ಕಾರ್ಯಾಚರಣೆ ವೇಳೆ ರೇಷನ್ ಸಂಗ್ರಹಕ್ಕೆಂದು ಬಂದಿದ್ದ ವಿಕ್ರಂ ಗೌಡ ಸಹಿತ ಐವರು ನಕ್ಸಲರು ಪೊಲೀಸರಿಗೆ ಮುಖಾಮುಖಿಯಾಗಿದ್ದರು.

ಈ ನಡುವೆ ಇತ್ತಂಡಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಘಟನೆಯಲ್ಲಿ ವಿಕ್ರಂ ಗೌಡ ಸಾವನ್ನಪ್ಪಿದ್ದಾನೆ.
ಮತ್ತೆ ಗರಿಗೆದರಿದ ನಕ್ಸಲ್ ಚಟುವಟಿಕೆ
ಹಲವು ವರ್ಷಗಳಿಂದ ಶಾಂತವಾಗಿದ್ದ ಪಶ್ಚಿಮಘಟ್ಟದಲ್ಲಿ ಇತ್ತಿಚಿನ ದಿನಗಳಲ್ಲಿ ನಕ್ಸಲ್ ಚಟುವಟಿಕೆ ಗರಿಗೆದರಿತ್ತು. ಪಶ್ಚಿಮಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ, ಹಲವು ದಿನಗಳಿಂದ ಶಿವಮೊಗ್ಗ, ಶೃಂಗೇರಿ ಸೇರಿದಂತೆ ಹಲವು ಕಡೆ ಸಭೆ ಕೂಡ ನಡೆಸಲಾಗಿತ್ತು.

ಯಾರೀ ವಿಕ್ರಮ್ ಗೌಡ?
ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಮೋಸ್ಟ್‌ವಾಂಟೆಡ್ ನಕ್ಸಲ್ ನಾಯಕ. ಮೂಲತಃ ಕಾರ್ಕಳ ತಾಲೂಕಿನವರಾಗಿರುವ ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಚಳುವಳಿ ಸಂದರ್ಭ ನಕ್ಸಲ್ ಚಟುವಟಿಕೆಗೆ ಧುಮುಕಿದ್ದ. ಕಬಿನಿ-2 ಟೀಂನ ಮುಖ್ಯಸ್ಥನಾಗಿದ್ದ ವಿಕ್ರಂ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್‌ವಾಂಟೆಂಡ್ ನಕ್ಸಲ್. ಇವನ ವಿರುದ್ಧ 61ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು ಕಳೆದ 20 ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ಪರಾರಿಯಾಗುತ್ತಿದ್ದ ವಿಕ್ರಂ. ಕೇರಳದಲ್ಲಿ ಹಲವು ದಿನಗಳಿದಿದ್ದ ವಿಕ್ರಂ ಎರಡು ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ. ಕರ್ನಾಟಕಕ್ಕೆ ಬಂದ ಬಳಿಕ ಮತ್ತೇ ನಕ್ಸಲ್ ಚಟುವಟಿಕೆ ಕೂಡ ಗರಿಗೆದರಿತ್ತು. ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ ತೆರವು ಮೊದಲಾದ ವಿಚಾರಗಳ ಹಿನ್ನೆಲೆ ಹೋರಾಟಕ್ಕೆ ಇಳಿದು ಹಲವು ಕಡೆಗಳಲ್ಲಿ ಸಭೆ ಕೂಡ ನಡೆಸಿದ್ದ.

ಇವನ ತಲೆ 5 ಲಕ್ಷ ಬಹುಮಾನ
ವಿಕ್ರಂ ಗೌಡ ಪತ್ತೆ ಮತ್ತು ಅವರ ಸಹಚರರಾದ ಮುಂಡಗಾಡು ಲತಾ, ಜಯಣ್ಣ, ವನಜಾಕ್ಷಿ ಈ ನಾಲ್ವರ ಸುಳಿವು ನೀಡಿದವರೆಗೆ 10 ವರ್ಷಗಳಿಂದ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಸ್ಥಳಕ್ಕೆ ಐಜಿಪಿ ಡಿ. ರೂಪಾ ಭೇಟಿ

ಸ್ಥಳಕ್ಕೆ ಐಜಿಪಿ ಡಿ. ರೂಪಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇರುವ ನಕ್ಸಲ್‌ಗಳ ಪೈಕಿ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ, 61 ಕೇಸುಗಳು ಅವರ ಮೇಲಿತ್ತು. ಅದರಲ್ಲಿ 19 ಕೇಸುಗಳು ಕೇರಳ ರಾಜ್ಯದಲ್ಲಿ ದಾಖಲಾಗಿತ್ತು. ಕಳೆದ 10 ದಿನಗಳಿಂದ ಸತತವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದೇವೆ. ನ.10ನಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. 2005ರ ಮೇನಲ್ಲಿ ಆರಂಭಗೊಂಡಿರುವ ಎಎನ್‌ಎಫ್ ಈ ಎನ್‌ಕೌಂಟರ್ ಸೇರಿ ನಡೆಸಿದ್ದು 4ನೇ ಎನ್‌ಕೌಂಟರ್. ವಿಕ್ರಂ ಗೌಡರ ನಂತರ ಇನ್ನೂ 5-6 ಜನ ಇದ್ದಾರೆ. ಅವರು ಮುಂದೆ ಏನು ನಡೆಸುತ್ತಾರೆ ಎನ್ನುವುದು ಕಾದು ನೋಡಬೇಕು. ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಯುತ್ತದೆ. ಕೆಎಸ್‌ಐಎಸ್‌ಫ್ ನಿಂದ 75 ಜನ, ಶಿವಮೊಗ್ಗದಿಂದ 25 ಜನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.