ಮಂಗಳೂರು: 40.15ನಿಮಿಷ ಯೋಗ ನಿದ್ರಾಸನ ಮಾಡಿದ ಮಂಗಳೂರಿನ ಏಳನೇ ತರಗತಿ ವಿದ್ಯಾರ್ಥಿನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾಳೆ.
ಫಳ್ನೀರ್ ಸೈಂಟ್ ಮೇರೀಸ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್‌ನಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ವೆನ್ಸಿಟಾ ವಿಯಾನಿ ಡಿಸೋಜ ಈ ದಾಖಲೆ ಬರೆದವಳು. ಯೋಗ ತರಬೇತುದಾರೆ ಕವಿತಾ ಅಶೋಕ್ ಅವರ ಮಾರ್ಗದರ್ಶನದಲ್ಲಿ ಈಕೆ ಈ ಸಾಧನೆ ಮಾಡಿದ್ದಾಳೆ. ವೆನ್ಸಿಟಾ ವಿಯಾನಿ ಡಿಸೋಜ ಎಲ್‌ಕೆಜಿಯಿಂದಲೇ ಯೋಗ ತರಬೇತಿ ಪಡೆಯುತ್ತಿದ್ದಾಳೆ. ಈಕೆ ಪುತ್ತೂರಿನ ಅದಿತಿ ಆರ್.ಐ. ಈ ಹಿಂದೆ 19ನಿಮಿಷ ಯೋಗ ನಿದ್ರಾಸನದಲ್ಲಿ ಮಾಡಿರುವ ದಾಖಲೆಯನ್ನು ಮುರಿದು 40.15ನಿಮಿಷ ಯೋಗ ನಿದ್ರಾಸನ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾಳೆ.
ಯೋಗ ನಿದ್ರಾಸನವನ್ನು ಹಿಂದೆ ಋಷಿಮುನಿಗಳು ಮರದಲ್ಲಿ ಮಾಡುತ್ತಿದ್ದ ಬಗ್ಗೆ ಉಲ್ಲೇಖವಿದೆ. ವೆನ್ಸಿಟಾ ವಿಯಾನಿ ಡಿಸೋಜ ಅವರು ಎರಡೂ ಕಾಲುಗಳನ್ನು ಮುಂದಕ್ಕೆ ಮಡಚಿ ಕತ್ತಿನ ಸುತ್ತಲೂ ಲಾಕ್ ಮಾಡಿ ಕೈಗಳನ್ನು ಸೊಂಟದ ಭಾಗದಲ್ಲಿ ಇರಿಸಿ 40.15ನಿಮಿಷ ಈ ಭಂಗಿಯಲ್ಲಿಯೇ ಯೋಗ ಮಾಡಿದ್ದಾರೆ. ಸುದೀರ್ಘವಧಿ ಯೋಗ ನಿದ್ರಾಸನ ಮಾಡಿದ್ದನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ವೆನ್ಸಿಟಾ ವಿಯಾನಿ ಡಿಸೋಜ ಹೆಸರನ್ನು ದಾಖಲು ಮಾಡಲಾಗಿದೆ.
ವೆನ್ಸಿಟಾ ವಿಯಾನಿ ಡಿಸೋಜ ನಾಗುರಿ ನಿವಾಸಿ ಪ್ರವೀಣ್ ನೇರಿ ಡಿಸೋಜ ಹಾಗೂ ವಿನಿತಾ ಡಿಸೋಜ ಅವರ ಪುತ್ರಿ. ಈಕೆಯ ಸಾಧನೆಗೆ ಫಳ್ನೀರ್ ಸೈಂಟ್ ಮೇರೀಸ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್‌ನ ಮುಖ್ಯಶಿಕ್ಷಕಿ ಮೈಸಿ ಎ.ಸಿ.ಯವರು ಬೆನ್ನೆಲುಬಾಗಿ ನಿಂತಿದ್ದಾರೆ.