ಕೋಟ: ಇಲ್ಲಿನ ಮಣೂರಿನಲ್ಲಿ ಹೆಜ್ಜೇನು ಗುಂಪೊಂದು ದಾಳಿ ನಡೆಸಿದ ಪರಿಣಾಮ ಐವರು ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ದಾಳಿಗೊಳಗಾದವರು ಕೂಲಿ ಕಾರ್ಮಿಕರಾಗಿದ್ದು, ಕಂಪೌಂಡ್ ಕಟ್ಟುವುದಕ್ಕೆ ಕಲ್ಲು ಕೆಲಸಕ್ಕೆಂದು ಬಂದಿದ್ದರು. ಈ ಸಂದರ್ಭ ಏಕಾಏಕಿ ದಾಳಿ ನಡೆಸಿದ ಹೆಜ್ಜೇನಿನ ಹಿಂಡು ಮೇಸ್ತ್ರಿ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಕಾರ್ಮಿಕರಾದ ಮೊಹಮ್ಮದ್ ಪಾರಂಪಳ್ಳಿ, ಪ್ರಭಾಕರ, ಶೇಖರ್ ಪೂಜಾರಿ ಅವರನ್ನು ಗಾಯಗೊಳಿಸಿದೆ.
ಉಳಿದ ಐವರು ಕಾರ್ಮಿಕರು ಸ್ಥಳದಿಂದ ತಪ್ಪಿಸಿಕೊಂಡು ಹೋದ ಹಿನ್ನೆಲೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಟ ಪರಿಸರದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಕೆಲ ದಿನಗಳ ಹಿಂದೆ ಕೋಟತಟ್ಟು ಪಂಚಾಯತ್ ಉಪಾಧ್ಯಕ್ಷೆ ಮತ್ತು ಅವರ ಮಗಳ ಮೇಲೆ ಹೆಜ್ಜೇನು ಗುಂಪು ದಾಳಿ ನಡೆಸಿತ್ತು.