ಕೋಟ: ನಾಗಬನದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಮೂವರಿಗೆ ಗಾಯಗಳಾಗಿದೆ.

ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಮತ್ತು ಅವರ ಮಗಳು ಸೌಜನ್ಯ ಬಾರಿಕೆರೆಯ ಕಲ್ಮಾಡಿ ರಸ್ತೆಯಲ್ಲಿರುವ ನಾಗಬನಕ್ಕೆ ಪೂಜೆಗೆಂದು ತೆರಳಿದ ಸಂದರ್ಭ ಹೆಜ್ಜೇನಿನ ಹಿಂಡು ದಾಳಿ ನಡೆಸಿದೆ. ಇವರ ಕೂಗಾಟ ಕೇಳಿ ಡೈರಿಗೆ ಹೋಗಿ ವಾಪಾಸು ಬರುತ್ತಿದ್ದ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ರಕ್ಷಣೆಗೆ ಧಾವಿಸಿದ್ದು, ಅವರಿಗೂ ಕೂಡ ಹೆಜ್ಜೇನು ದಾಳಿ ನಡೆಸಿದೆ.

ತಕ್ಷಣ ಅಕ್ಕಪಕ್ಕದ ಮನೆಯವರು ಬಂದು ಮೂವರನ್ನು ರಕ್ಷಿಸಿದ್ದಾರೆ. ಉಪಾಧ್ಯಕ್ಷೆ ಮಗಳು ಸೌಜನ್ಯ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜೀವಕ್ಕೇ ಅಪಾಯವಿಲ್ಲ ಎನ್ನಲಾಗಿದೆ. ಇನ್ನುಳಿದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಜೀವನ್‌ಮಿತ್ರ ನಾಗರಾಜ್ ಪುತ್ರನ್ ಅಂಬ್ಯುಲೆನ್ಸ್‌ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.