ಚೆನ್ನಪಟ್ಟಣ: ಚೆನ್ನಪಟ್ಟಣ ಉಪಚುನಾವನೆಯ ಫಲಿತಾಂಶ ಹೊರ ಬಿದ್ದಿದ್ದು, ಕೇಂದ್ರಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ, ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಕಹಿಯನ್ನುಂಡಿದ್ದಾರೆ.
ಸತತ ಎರಡು ಬಾರಿ ಸೋತು ಮಾಡು ಇಲ್ಲವೆ ಮಡಿ ಎಂಬಂತೆ ಹೋರಾಟ ನಡೆಸಿದ್ದ ನಿಖಿಲ್ ಈ ಬಾರಿಯೂ ಸೋತು ಸಿಪಿ ಯೋಗೇಶ್ವರ್ಗೆ ಶರಣಾಗಿದ್ದಾರೆ.
ಸಿಪಿ ಯೋಗೇಶ್ವರ್ ಈ ಹಿಂದೆ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ಚೆನ್ನಪಟ್ಟಣ್ಣದಿಂದಲೇ ಸ್ಪರ್ಧಿಸಿದ್ದರು. ಆಗ ಗೆದ್ದು ಬೀಗಿದ್ದ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ದೆಹಲಿಯಲ್ಲಿ ಸಚಿವರಾಗಿದ್ದಾರೆ. ಈ ಹಿನ್ನೆಲೆ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ನಿಖಿಲ್ ಪುನಃ ಅದೃಷ್ಟ ಪರೀಕ್ಷೆಗೆ ತಮ್ಮನ್ನು ಒಡ್ಡಿದ್ದರು. ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ ಯೋಗೇಶ್ವರ್ ಬಿಜೆಪಿಯಿಂದ ಪುನಃ ಟಿಕೇಟ್ ಪಡೆಯುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಕೊನೆಗಳಿಗೆಯಲ್ಲಿ ನಿಖಿಲ್ಗೆ ಟಿಕೆಟ್ ನಿಖರವಾದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಜಿಗಿದು, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಜಿದ್ದಾಜಿದ್ದಿನ ಇಡೀ ರಾಜ್ಯದ ಕುತೂಹಲ ಸೃಷ್ಟಿಸಿದ್ದ ಕ್ಷೇತ್ರವಾಗಿದ್ದ ಚೆನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿ ಯೋಗೇಶ್ವರ್ 24,889ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.