ಉಡುಪಿ: ರಾಜ್ಯದಲ್ಲಿ ವಕ್ಫ ವಿವಾದ ತಾರಕ್ಕೇರಿದ್ದು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ ನಡೆಸಿತು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮತ್ತು ಶಾಸಕ ಯಶಪಾಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಘೋಷಣೆ ಕೂಗಿದರು.

ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಬಿಜೆಪಿ ನಾಯಕರು, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಗೇಟಿನಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲೆಯ ಯಾವುದೇ ಆಸ್ತಿಯಲ್ಲಿ ವಕ್ಫ ಎಂದು ನಮೂದಾಗಿದ್ದಲ್ಲಿ ಬಿಜೆಪಿಗೆ ತಿಳಿಸುವಂತೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಅಲ್ಪಸಂಖ್ಯಾತರ ಓಲೈಕೆಗೆ ವಕ್ಫ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಹೊರಟಿದ್ದಾರೆ. ಇದು ಹಿಂದೂಗಳ ಜೇನುಗೂಡಿಗೆ ಕೈ ಹಾಕಿದಂತೆ, ಇದು ಹಿಂದೂಗಳ ತಾಳ್ಮೆಯನ್ನು ಪರೀಕ್ಷೆ ಮಾಡಲು ಸಿದ್ದರಾಮಯ್ಯ ಹೊರಟಂತಿದೆ. ಇದು ಮೂಡಾ ಹಗರಣವನ್ನು ಮುಚ್ಚಿಹಾಕುವುದಕ್ಕೆ ಮಾಡಿದ ಷಡ್ಯಂತ್ರವಾಗಿದೆ. ವಕ್ಫಬೋರ್ಡ ಮುಖಾಂತರ ಹಿಂದೂಗಳ ಮತ್ತು ರೈತರ ಜಮೀನುಗಳಿಗೆ ಕೈ ಹಾಕಿದರೆ ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ. ಉಡುಪಿಯಲ್ಲಿ ತುಂಡು ಭೂಮಿ ಕೂಡ ವಕ್ಫಬೋರ್ಡ್‌ಗೆ ಹೋಗಲು ಬಿಡುವುದಿಲ್ಲ. ಎಲ್ಲಿಯಾದರೂ ಈ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಮುಂಬರುವ ಉಪಚುನಾವಣೆಯ ಬಳಿಕ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಶತಸಿದ್ದ. ಸಿದ್ದರಾಮಯ್ಯನವರೇ ಮುಂದಿನ ನಿವೃತ್ತ ಜೀವನ ಹೇಗೆ ನಡೆಸುವುದು ಎಂಬುದನ್ನು ನೋಡಿಕೊಳ್ಳಿ ಎಂದು ಯಶಪಾಲ್ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.

ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಎಷ್ಟು ಆಸ್ತಿಗಳಲ್ಲಿ ವಕ್ಫ ಎಂದು ನಮೂದಾಗಿದೆ ಎಂಬುದು ತಿಳಿದಿಲ್ಲ. ಈ ಹಿನ್ನೆಲೆ ನಾಳೆಯಿಂದ ಬಿಜೆಪಿ ನೇತೃತ್ವದಲ್ಲಿ ಪ್ರತಿ ತಾಲೂಕು ಕಚೇರಿಗಳಲ್ಲಿ ಪಹಣಿ ಪರಿಶೀಲನೆ ನಡೆಯಲಿದೆ ಎಂದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್‌ಶೆಟ್ಟಿ ಬಿಲ್ಲಾಡಿ, ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ರಾಜೀವ್ ಕುಲಾಲ್ ಸೇರಿದಂತೆ ಬಿಜೆಪಿಯ ವಿವಿಧ ಮೋರ್ಚಾಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.